ನವದೆಹಲಿ:  2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಮುಂದಿನ ಪ್ರಧಾನಿ ಯಾರಾಗಬಹುದು ಎಂಬ ಜನರ ಕುತೂಹಲ ತಣಿಸುವ ನಿಟ್ಟಿನಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ನಂ.1 ಆಗಿ ಹೊರಹೊಮ್ಮಿದ್ದಾರೆ. 

"

ಅದರಲ್ಲೂ ವಿಶೇಷವೆಂದರೆ ಇತ್ತೀಚೆಗೆ ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ನಡೆಸಿದ ವಾಯುದಾಳಿಯ ಬಳಿಕ ಮೋದಿ ಜನಪ್ರಿಯತೆಯಲ್ಲಿ ಭಾರೀ ಏರಿಕೆಯಾಗಿದೆ. ಮತ್ತೊಂದೆಡೆ ಇದೇ ಅವಧಿಯಲ್ಲಿ ಪ್ರಧಾನಿ ಹುದ್ದೆ ರೇಸ್‌ನಲ್ಲಿ 2ನೇ ಸ್ಥಾನದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜನಪ್ರಿಯತೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

‘ರಿಪಬ್ಲಿಕ್’ ಸುದ್ದಿವಾಹಿನಿಯು ಸಿ ವೋಟರ್ ಸಂಸ್ಥೆಯ ಜೊತೆಗೂಡಿ ಕಳೆದ 3 ತಿಂಗಳ ಅವಧಿಯಲ್ಲಿ ನಡೆಸಿದ ದೇಶವ್ಯಾಪಿ ಸಮೀಕ್ಷೆಯಲ್ಲಿ ಈ ಅಚ್ಚರಿಯ ಅಂಶ ಹೊರಬಿದ್ದಿದೆ. 

ಭರ್ಜರಿ ಜನಪ್ರಿಯತೆ: ಕಳೆದ ಜನವರಿ ತಿಂಗಳಲ್ಲಿ ಮೋದಿ ಜನಪ್ರಿಯತೆ ಶೇ. 32.4ರಷ್ಟಿತ್ತು. ಫೆ.1ರಂದು ಕೇಂದ್ರ ಸರ್ಕಾರ ಜನಪ್ರಿಯ ಬಜೆಟ್ ಮಂಡಿಸಿದ ವೇಳೆ ಮೋದಿ ಅವರ ಜನಪ್ರಿಯತೆ ಶೇ. 39.1ಕ್ಕೆ ಏರಿತು. ಫೆ. 26ರಂದು ಭಾರತೀಯ ವಾಯುಪಡೆ ಪಾಕ್ ಉಗ್ರ ಶಿಬಿರದ ಮೇಲೆ ದಾಳಿ ನಡೆಸಿದಾಗ ಮೋದಿ ಜನಪ್ರಿಯತೆ ಪ್ರಮಾಣ ಶೇ. 51. 9ಕ್ಕೆ ಏರಿತು. ದಾಳಿ ನಡೆದ 15 ದಿನಗಳ ಬಳಿಕ ಅಂದರೆ ಮಾ.7ರ ವೇಳೆಗೆ ಜನಪ್ರಿಯತೆ ಪ್ರಮಾಣ ಭರ್ಜರಿ ಶೇ. 63.2ಕ್ಕೆ ತಲುಪಿತು ಎಂದು ಸಮೀಕ್ಷೆ ಹೇಳಿದೆ. 

ಭಾರೀ ಇಳಿಕೆ: ಈ ನಡುವೆ ಮೋದಿ ಜನಪ್ರಿಯತೆ ಏರುತ್ತಿದ್ದಂತೆ ಮತ್ತೊಂದೆಡೆ ಪ್ರಧಾನಿ ಹುದ್ದೆ ರೇಸ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜನಪ್ರಿಯತೆಯಲ್ಲೂ ಭರ್ಜರಿ ಇಳಿಕೆ ಕಂಡುಬಂದಿದೆ. ಜ.1ಕ್ಕೆ ರಾಹುಲ್ ಜನಪ್ರಿಯತೆ ಶೇ. 23.3ರಷ್ಟು ಇತ್ತು. ಫೆ.1ಕ್ಕೆ ಅದು ಶೇ. 18.3ಕ್ಕೆ, ವಾಯುದಾಳಿ ನಡೆದ ಫೆ. 26ಕ್ಕೆ ಶೇ. 11.7 ಮತ್ತು ಮಾ. 7ರಂದು ಅದು ಶೇ. 8. 2ರಷ್ಟಕ್ಕೆ ಕುಸಿದಿದೆ ಎಂದು ಸಮೀಕ್ಷೆ ಹೇಳಿದೆ. 

ಭರ್ಜರಿ ವ್ಯತ್ಯಾಸ: ಜನವರಿ 1ರಿಂದ ಮಾ.7ರ ಅವಧಿಯಲ್ಲಿ ಮೋದಿ ಜನಪ್ರಿಯತೆಯಲ್ಲಿ ಹೆಚ್ಚು ಕಡಿಮೆ ಶೇ. 32ರಷ್ಟು ಏರಿಕೆ ಕಂಡಿದ್ದರೆ, ಇದೇ ಅವಧಿಯಲ್ಲಿ ರಾಹುಲ್ ಜನಪ್ರಿಯತೆಯಲ್ಲಿ ಶೇ. 15ರಷ್ಟು ಇಳಿಕೆ ಕಂಡುಬಂದಿದೆ.