ಬೆಂಗಳೂರು[ಜು.19]: ದೈವ, ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆ ಹೊಂದಿರುವ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರು ಗುರುವಾರ ವಿಶ್ವಾಸಮತ ಯಾಚನೆಗಾಗಿ ವಿಧಾನಸೌಧಕ್ಕೆ ಹೊರಟಿದ್ದ ತಮ್ಮ ಸಹೋದರ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಕಾರನ್ನು ರಸ್ತೆಯಲ್ಲೇ ತಡೆದು ದೇವರ ಪ್ರಸಾದ ಕೊಟ್ಟಪ್ರಸಂಗ ನಡೆದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆಗೂ ಮುನ್ನ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ಪದ್ಮನಾಭನಗರ ಮನೆಗೆ ತೆರಳಿದ್ದರು. ದೇವೇಗೌಡ ಅವರ ಭೇಟಿ ಬಳಿಕ ಕೆಲ ನಿಮಿಷ ಚರ್ಚೆ ನಡೆಸಿ ಅವರ ಆಶೀರ್ವಾದ ಪಡೆದುಕೊಂಡ ನಂತರ ವಿಧಾನಸೌಧದತ್ತ ಬೆಂಗಾವಲಿನ ಮಧ್ಯೆ ಕಾರಿನಲ್ಲಿ ಹೊರಟಿದ್ದರು.

ದೇವೇಗೌಡರ ನಿವಾಸದ ಮುಖ್ಯರಸ್ತೆಯಲ್ಲಿ ಬಂದ ರೇವಣ್ಣ ಅವರು ಕಾರು ನಿಲ್ಲಿಸುವಂತೆ ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿಗೆ ಕೈಸನ್ನೆ ಮೂಲಕ ಸೂಚಿಸಿದ್ದಾರೆ. ಕೂಡಲೇ ಮುಖ್ಯಮಂತ್ರಿ ಭದ್ರತಾ ಸಿಬ್ಬಂದಿ ತಮ್ಮ ಕಾರು ನಿಲ್ಲಿಸಿದ್ದರು. ನಂತರ ಕುಮಾರಸ್ವಾಮಿ ಅವರ ಕಾರಿನ ಬಳಿ ಬಂದ ರೇವಣ್ಣ, ದೇವರ ಪೂಜೆ ಮಾಡಿಸಿ ತಂದಿದ್ದ ಪ್ರಸಾದವನ್ನು ಸಹೋದರನಿಗೆ ರಸ್ತೆಯಲ್ಲಿ ನೀಡಿದರು. ಪ್ರಸಾದ ಪಡೆದ ಕುಮಾರಸ್ವಾಮಿ ಬಳಿಕ ವಿಧಾನಸೌಧಕ್ಕೆ ತೆರಳಿದರು.