Asianet Suvarna News Asianet Suvarna News

ಶ್ರಮಪಟ್ಟವರಿಗೆ ಕಾಂಗ್ರೆಸ್‌ ನಲ್ಲಿ ಹುದ್ದೆ

ಕಾಂಗ್ರೆಸ್ ಪಕ್ಷದಲ್ಲಿ ಶ್ರಪಟ್ಟವರಿಗೆ ತಕ್ಕುನಾಗಿ ಗೌರವಯುತವಾದ ಹುದ್ದೆಯನ್ನು ನೀಡಲಾಗುತ್ತದೆ. ಶ್ರಮಪಟ್ಟವರಿಗೆ ಸ್ಥಾನ ನೀಡುವುದು ಕಾಂಗ್ರೆಸ್ ಸಂಸ್ಕೃತಿ ಎಂದು ಡಿ.ಕೆ ಶಿವಕುಮಾರ್ ಹೇಳಿದರು. 

BV Shrinivas Appoint Youth Congress VIce President

ಬೆಂಗಳೂರು :  ಲೋಕವು ಹೇಗೆ ರಾಮನಿಗಿಂತ ಆಂಜನೇಯನ ಸೇವಾ ಭಕ್ತಿಯನ್ನು ಹೆಚ್ಚಾಗಿ ಪೂಜಿಸುತ್ತದೆಯೋ ಅದೇ ರೀತಿ ಕಾಂಗ್ರೆಸ್‌ ಪಕ್ಷವೂ ಶ್ರಮಪಟ್ಟವರಿಗೆ ಸ್ಥಾನಮಾನ ನೀಡುತ್ತದೆ. ಕಚೇರಿಯಲ್ಲಿ ಕಸ ಗುಡಿಸಿದ ವ್ಯಕ್ತಿಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡಿರುವುದು ಕಾಂಗ್ರೆಸ್‌ನ ಸಂಸ್ಕೃತಿಗೆ ಉದಾಹರಣೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಭಾನುವಾರ ನಗರದ ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ವಿ.ಶ್ರೀನಿವಾಸ್‌ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ತಳಮಟ್ಟದಿಂದ ಬಂದ ಹಾಗೂ ಪಕ್ಷಕ್ಕಾಗಿ ನಿಸ್ವಾರ್ಥವಾಗಿ ದುಡಿದ ಕಾರ್ಯಕರ್ತನಿಗೆ ಅಧಿಕಾರ ಕೊಡುವ ಪಕ್ಷ ಕಾಂಗ್ರೆಸ್‌ ಮಾತ್ರ. ಲೋಕದಲ್ಲಿ ರಾಮನಿಗಿಂತಲೂ ಹೆಚ್ಚು ಗೌರವ ಹಾಗೂ ಪ್ರೀತಿ ಸಿಗುವುದು ರಾಮನ ಭಂಟ ಆಂಜನೇಯನಿಗೆ. ಎಲ್ಲಾ ಊರುಗಳಲ್ಲೂ ರಾಮನ ದೇವಸ್ಥಾನ ಇರುವುದಿಲ್ಲ. ಆದರೆ, ಆಂಜನೇಯನ ದೇವಸ್ಥಾನ ಕಡ್ಡಾಯವಾಗಿ ಇರುತ್ತದೆ. ಇದಕ್ಕೆ ಕಾರಣ ಆಂಜನೇಯನ ಸೇವಾಭಕ್ತಿ. ಇದೇ ರೀತಿ ಕಾಂಗ್ರೆಸ್‌ ಕೂಡ ಸೇವಾ ಭಕ್ತಿಯನ್ನು ಅರ್ಹತೆಯಾಗಿ ಪರಿಗಣಿಸಿ ಸ್ಥಾನಮಾನ ನೀಡುತ್ತದೆಯೇ ಹೊರತು ಹಿನ್ನೆಲೆ ಹಾಗೂ ಆರ್ಥಿಕ ಬಲ ನೋಡಿ ಅಲ್ಲ ಎಂದು ಹೇಳಿದರು.

ರಾಜ್ಯಸಭಾ ಸದಸ್ಯರಾಗಿರುವ ಜಿ.ಸಿ.ಚಂದ್ರಶೇಖರ್‌ ಅವರು ಕಾಂಗ್ರೆಸ್‌ ಕಚೇರಿಯಲ್ಲಿ ಕಸ ಗುಡಿಸುತ್ತಿದ್ದರು. ರಾಜ್ಯದಿಂದ ತೆರವಾಗಿದ್ದ ಮೂರು ರಾಜ್ಯಸಭಾ ಸದಸ್ಯ ಸ್ಥಾನಗಳಿಗೆ ಘಟಾನುಘಟಿಗಳು ಪೈಪೋಟಿ ನಡೆಸಿದ್ದರು. ಆದರೆ, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಪಕ್ಷಕ್ಕಾಗಿ ದುಡಿದ ಮೂವರು ಯುವಕರಿಗೆ ಅವಕಾಶ ನೀಡಿದರು. ಭಕ್ತಿ ಇರುವ ಕಡೆ ಭಗವಂತ ಹಾಗೂ ಶ್ರಮ ಇರುವ ಕಡೆ ಪ್ರತಿಫಲ ಇರುತ್ತದೆ ಎಂದರು.

ಎನ್‌ಎಸ್‌ಯುಐನಿಂದ ಬಂದವರು ಪಕ್ಷ ಬಿಡಲ್ಲ:

ಎನ್‌ಎಸ್‌ಯುಐನಿಂದ ತರಬೇತಿ ಪಡೆದ ಬ್ಲಾಕ್‌ ಕಾಂಗ್ರೆಸ್‌ ಮಟ್ಟದಿಂದ ಯಾರು ಬೆಳೆದಿದ್ದಾರೋ ಅವರು ಯಾರೂ ಪಕ್ಷಾಂತರ ಮಾಡುವುದಿಲ್ಲ. ಕೊನೆಯವರೆಗೂ ಕಾಂಗ್ರೆಸ್‌ನಲ್ಲಿಯೇ ಉಳಿಯುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ತಾವು ಪಕ್ಷಾಂತರ ಮಾಡುವುದಿಲ್ಲ ಎಂಬುದನ್ನು ಹೇಳಿದರು.

ಪ್ರೇಮಿಗಳ ದಿನ ವಿರೋಧಿಸಿದ ಪ್ರಮೋದ್‌ ಮುತಾಲಿಕ್‌ ಮುಖಕ್ಕೆ ಮಸಿ ಬಳಿದಿದ್ದು ಶ್ರೀನಿವಾಸ್‌. ಆಗ ಬಂಧಿತನಾಗಿದ್ದ ಶ್ರೀನಿವಾಸ್‌ ಬೆಂಬಲಕ್ಕೆ ಯಾವ ನಾಯಕರೂ ಹೋಗಲಿಲ್ಲ. ನಾನು ಅವರಿಗೆ ಜಾಮೀನು ಕೊಡಿಸಿ ಬಿಡಿಸುವ ಪ್ರಯತ್ನ ಮಾಡಿದೆ. ಹೆಚ್ಚು ಶ್ರಮ ಹಾಕಿ ಹೋರಾಟ ಮಾಡುವವರು ಹಾಗೂ ಹೆಚ್ಚು ವಿವಾದಕ್ಕೆ ಗುರಿಯಾಗುವವರು ನಾಯಕರಾಗಿ ಬೆಳೆಯುತ್ತಾರೆ. ಬಿ.ಕೆ. ಹರಿಪ್ರಸಾದ್‌ ಹೊರತುಪಡಿಸಿದರೆ ರಾಜ್ಯದಿಂದ ರಾಷ್ಟ್ರೀಯ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಸ್ಥಾನ ಅಲಂಕರಿಸುವುದು ಶ್ರೀನಿವಾಸ್‌ ಮಾತ್ರ. ಅಧಿಕಾರ ಇರಲಿ, ಬಿಡಲು ನಾನು ಮಾತ್ರ ಯುವಕರ ಜತೆ ಇರುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌, ಶಾಸಕಿ ಸೌಮ್ಯಾರೆಡ್ಡಿ ಸೇರಿ ಯುವ ಕಾಂಗ್ರೆಸ್‌ ಪದಾಧಿಕಾರಿಗಳು ಹಾಜರಿದ್ದರು.

ಮುತಾಲಿಕ್‌ಗೆ ಮಸಿ ಬಳಿದಾಗ ನನ್ನನ್ನು ಉಳಿಸಿದ್ದು ಸಚಿವ ಡಿಕೆಶಿ

ಪ್ರಮೋದ್‌ ಮುತಾಲಿಕ್‌ಗೆ ನಾನು ಮಸಿ ಬಳಿದಾಗ ನನ್ನ ಅಮಾನತು ಮಾಡಲು ಕೆಪಿಸಿಸಿಯಿಂದ ಮೂರು ಶಿಫಾರಸು ಮಾಡಲಾಗಿತ್ತು. ಆ ವೇಳೆ ನನ್ನ ಉಳಿಸಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್‌ ಅವರು. ನಾನು ನನ್ನ ಕೊನೆ ಉಸಿರಿರುವರೆಗೆ ಕಾಂಗ್ರೆಸ್‌ನಲ್ಲಿ ಇರುತ್ತೇನೆ. ರಾಹುಲ್‌ಗಾಂಧಿ ಅವರನ್ನು ಪ್ರಧಾನಿ ಮಾಡುವುದೇ ನನ್ನ ಗುರಿ ಎಂದು ಯುವ ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀನಿವಾಸ್‌ ಹೇಳಿದರು.

Follow Us:
Download App:
  • android
  • ios