Asianet Suvarna News Asianet Suvarna News

ಬಸ್‌ ಟಿಕೆಟ್‌ ದರ ಭಾರೀ ದುಬಾರಿ?

ಡೀಸೆಲ್‌ ದರ ಹೆಚ್ಚಳದಿಂದ ಕಳೆದ ಮೂರು ತಿಂಗಳಿಂದ ಕೆಎಸ್‌ಆರ್‌ಟಿಸಿ 186 ಕೋಟಿ ರು. ಹೊರೆ ಹೊರಬೇಕಾಗಿ ಬಂದಿದೆ. ಎರಡೂವರೆ ತಿಂಗಳ ಹಿಂದೆ ಪ್ರಯಾಣ ದರವನ್ನು ಶೇ.18ರಷ್ಟುಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅನಂತರವೂ ಡೀಸೆಲ್‌ ದರ ಹೆಚ್ಚಾಗುತ್ತಲೇ ಇದೆ. ಹಾಗಾಗಿ ದರ ಹೆಚ್ಚಳ ಮಾಡಲೇಬೇಕಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿದ್ದಾರೆ. 

Bus Ticket Fare Hike 18 Percent
Author
Bengaluru, First Published Sep 5, 2018, 7:37 AM IST

ಬೆಂಗಳೂರು :  ಡೀಸೆಲ್‌ ದರ ನಿರಂತರವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಸ್‌ ಪ್ರಯಾಣ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದ್ದು, ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ದರ ಜಾಸ್ತಿ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡೀಸೆಲ್‌ ದರ ಹೆಚ್ಚಳದಿಂದ ಕಳೆದ ಮೂರು ತಿಂಗಳಿಂದ ಕೆಎಸ್‌ಆರ್‌ಟಿಸಿ 186 ಕೋಟಿ ರು. ಹೊರೆ ಹೊರಬೇಕಾಗಿ ಬಂದಿದೆ. ಎರಡೂವರೆ ತಿಂಗಳ ಹಿಂದೆ ಪ್ರಯಾಣ ದರವನ್ನು ಶೇ.18ರಷ್ಟುಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅನಂತರವೂ ಡೀಸೆಲ್‌ ದರ ಹೆಚ್ಚಾಗುತ್ತಲೇ ಇದೆ. ಹಾಗಾಗಿ ದರ ಹೆಚ್ಚಳ ಮಾಡಲೇಬೇಕಾಗಿದೆ. ಪ್ರಯಾಣಿಕರಿಗೆ ಹೊರೆಯಾಗದಂತೆ ಹಾಗೂ ಸಾರಿಗೆ ಸಂಸ್ಥೆಗೂ ನಷ್ಟವಾಗದಂತೆ ದರ ಹೆಚ್ಚಳ ಮಾಡಲಾಗುವುದು. ಕೆಎಸ್‌ಆರ್‌ಟಿಸಿ ಸೇರಿದಂತೆ ಬಿಎಂಟಿಸಿ, ಈಶಾನ್ಯ ಹಾಗೂ ವಾಯವ್ಯ ಸಾರಿಗೆ ನಿಗಮಗಳಿಗೂ ದರ ಹೆಚ್ಚಳ ಅನ್ವಯವಾಗಲಿದೆ ಎಂದರು.

ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಸಚಿವರ ಜೊತೆ ಮಾತನಾಡಿದ್ದು, ಪರಿಶಿಷ್ಟಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಎಸ್‌ಸಿಪಿ ಮತ್ತು ಎಸ್‌ಟಿಪಿ ಅಡಿ ನೀಡುತ್ತಿದ್ದ ಶೇ.25ರಷ್ಟುಮೊತ್ತವನ್ನು ಶೇ.50ರಷ್ಟುಹೆಚ್ಚಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಸರ್ಕಾರ ಶೇ.50ರಷ್ಟುಮೊತ್ತವನ್ನು ಹಾಗೂ ಶೇ.50ರಷ್ಟುಹಣವನ್ನು ಸಮಾಜ ಕಲ್ಯಾಣ ಇಲಾಖೆ ಭರಿಸಲಿದೆ. ಬಹುತೇಕ ವಿದ್ಯಾರ್ಥಿಗಳು ಈಗಾಗಲೇ ಬಸ್‌ ಪಾಸ್‌ ತೆಗೆದುಕೊಂಡಿರುವುದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವ ಯೋಜನೆ ಬಗ್ಗೆ ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಖಾಸಗಿ ಬಸ್‌ಗಳ ವಿರುದ್ಧ ದೂರು ನೀಡಿಲ್ಲ:  ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಸಿಕ್ಕಾಪಟ್ಟೆಜಾಸ್ತಿ ಮಾಡುತ್ತಿರುವ ದೂರುಗಳು ತಮಗೂ ಬಂದಿವೆ. ಆದರೆ ಯಾರೂ ಸಹ ಈ ಬಗ್ಗೆ ದೂರು ನೀಡದ ಕಾರಣ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಹಬ್ಬದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ದರ ಹೆಚ್ಚಳ ಮಾಡುವುದಿಲ್ಲ. ಅಲ್ಲದೇ ಪ್ರಯಾಣಿಕರ ಒತ್ತಡ ಕಡಿಮೆ ಮಾಡಲು ಸಂಸ್ಥೆ ಹೆಚ್ಚುವರಿ ಬಸ್‌ಗಳನ್ನು ಸೇವೆಗೆ ಬಿಡುವ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

40 ಹೊಸ ಸ್ಲೀಪರ್‌ ಬಸ್‌ ಖರೀದಿ:  ದೂರದ ಊರುಗಳಿಗೆ ಸ್ಲೀಪರ್‌ ಕೋಚ್‌ ಬಸ್‌ಗಳ ಬೇಡಿಕೆ ಹೆಚ್ಚಿರುವುದರಿಂದ ಹೊಸದಾಗಿ 40 ಬಸ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದ ಅವರು, ಅನವಶ್ಯಕವಾಗಿ ಬಸ್‌ ಖರೀದಿ ಮಾಡುವ ಬಗ್ಗೆ ಕಡಿವಾಣ ಹಾಕಲಾಗಿದೆ. ಜೊತೆಗೆ ಅಗತ್ಯವಿಲ್ಲದಿದ್ದರೂ ಬಸ್‌ ಸಂಚಾರ ಮಾಡುವುದರಿಂದ ಸಂಸ್ಥೆಗೆ ನಷ್ಟವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದರು.

ಸಾರಿಗೆ ಇಲಾಖೆ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ಮುಂದಿನ ಮೂರು ತಿಂಗಳಲ್ಲಿ 400 ಆರ್‌ಟಿಒ ಹಾಗೂ ಬ್ರೇಕ್‌ ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. 139 ಹುದ್ದೆಗಳನ್ನು ಕೆಪಿಎಸ್‌ಸಿ ನೇಮಕ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಸರ್ಕಾರವೇ ಹೊಸ ಕಾನೂನು ರೂಪಿಸಿ ನೇಮಕ ಮಾಡಿಕೊಳ್ಳಲಿದೆ. ಈ ಬಗ್ಗೆ ಅಡ್ವೊಕೇಟ್‌ ಜನರಲ್‌ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

Follow Us:
Download App:
  • android
  • ios