ನವದೆಹಲಿ[ಜು.02]: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಿನ್ನೆ ಸಂಜೆ ಭಾಟಿಯಾ ಕುಟುಂಬದ 11 ಮಂದಿ ನೇಣಿಗೆ ಶರಣಾದ ಘಟನೆಗೆ ಹೊಸ ಟ್ವಿಸ್ಟ್ ದೊರಕಿದೆ.

ಆತ್ಮಹತ್ಯೆ ಮಾಡಿಕೊಂಡವರೆಲ್ಲ ಕಣ್ಣು, ಬಾಯಿ, ಕೈಗಳಿಗೆ ಬಟ್ಟೆ ಕಟ್ಟಿಕೊಂಡಿದ್ದರು. ಪ್ರಕರಣವನ್ನು ಜಾಲವನ್ನು ಭೇದಿಸಲು ಹೊರಟ ಪೊಲೀಸರಿಗೆ ಮನೆಯಲ್ಲಿ ಆಧ್ಯಾತ್ಮಿಕ ಸೂಚನೆಗಳನ್ನು ಒಳಗೊಂಡ ಪುಸ್ತಕವೊಂದು ದೊರಕಿದ್ದು ಇದರಲ್ಲಿ ಹಲವು ಮಾಹಿತಿಗಳು ಲಭ್ಯವಾಗಿವೆ.

ಈ ಪುಸ್ತಕದಲ್ಲಿ 2017ರಿಂದ ಆಧ್ಯಾತ್ಮಿಕ ಕುರಿತಾದ ಅಂಶಗಳನ್ನು ಬರೆಯಲಾಗಿದ್ದು ಬಾಯಿ, ಕಣ್ಣನ್ನು ಟೇಪ್​ ಅಥವಾ ಬಟ್ಟೆಯಿಂದ ಮುಚ್ಚಿಕೊಂಡು, ಕೈಗಳನ್ನು ಕಟ್ಟಿಕೊಂಡು ಭಯದಿಂದ ಬಿಡುಗಡೆ ಹೊಂದುವುದು ಹೇಗೆ ಎಂಬುದನ್ನು ಬರೆಯಲಾಗಿದೆ.

ಭಾಟಿಯಾ ಕುಟುಂಬ ಆಧುನಿಕ ಮನೋಭಾವದ ಜೊತೆ ಆಧ್ಯಾತ್ಮಿಕತೆಯ ಮೇಲೆ ಹೆಚ್ಚು ಒಲವು ಇಟ್ಟುಕೊಂಡಿದ್ದರು. ಮನೆಯಲ್ಲಿ ಏನಾದರೂ ದೇವರ ಕಾರ್ಯ ನಡೆದಾಗ ಮೈಮೇಲೆ ದೇವರು ಬಂದಂತೆ ಆಡುತ್ತಿದ್ದರು  ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಅತಿಯಾದ ಆಧ್ಯಾತ್ಮಿಕತೆ  ಮುಳುವಾಯ್ತಾ?
ಭಾಟಿಯಾ ಕುಟುಂಬ ದೇವರ ಕಾರ್ಯ ನಡೆದರೆ ಪುರೋಹಿತರ ಮಾತನ್ನು ಚಾಚುತಪ್ಪದೆ ಪಾಲಿಸುತ್ತಿದ್ದರು. ಪೊಲೀಸರ ಮಾಹಿತಿಯಂತೆ ಕುಟುಂಬದ ಯಾರೋ ಒಬ್ಬರು ಎಲ್ಲರಿಗೂ ಊಟದಲ್ಲಿ ನಿದ್ರಾಜನಕ ಬೆರಸಿಕೊಂಡು ಅನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 11ಜನರಲ್ಲಿ ವೃದ್ಧರು ಮೃತದೇಹ ಮಾತ್ರ ನೆಲದ ಮೇಲಿತ್ತು. ಆಧ್ಯಾತ್ಮಿಕತೆ ಸುಳಿವು ಹೊರತುಪಡಿಸಿದರೆ ಬೇರೆ ಅನುಮಾನಗಳು ಕಾಣಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.