ಬಿಜೆಪಿ ಕಸರತ್ತು ಅವರಿಗೆ ತಿರುಬಾಣವಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಈ ಕನಸು ಯಾವುದೇ ಕಾರಣಕ್ಕೂ ಈಡೇರುವುದಿಲ್ಲ. ಅವರು ಮುಖ್ಯಮಂತ್ರಿಯಾಗುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹುಬ್ಬಳ್ಳಿ/ಹಾವೇರಿ/ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ತಾವು ಏನಾದರೂ ಮಾಡಿ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬುದು ಮನಸ್ಸಿಗೆ ಬಂದಿದೆ. ಈ ಕಾರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಇದು ಅವರಿಗೇ ತಿರುಗುಬಾಣ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಈ ಕನಸು ಯಾವುದೇ ಕಾರಣಕ್ಕೂ ಈಡೇರುವುದಿಲ್ಲ. ಆದರೂ ಯಡಿಯೂರಪ್ಪ ಮತ್ತವರ ಆಪ್ತರು ಪ್ರಯತ್ನವಂತೂ ನಡೆಸುತ್ತಿದ್ದಾರೆ. ಈ ರೀತಿಯ ಪ್ರಯತ್ನದ ಕುರಿತು ಆ ಪಕ್ಷದಲ್ಲಿಯೇ ಕೆಲವು ಮುಖಂಡರಿಗೆ ಬೇಸರವಾಗಿದೆ. ಇದು ಮುಂದಿನ ದಿನಗಳಲ್ಲಿ ಬೇರೆಯದೇ ತಿರುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದರಾಚೆ ಅನೇಕ ವಿಷಯಗಳಿವೆ. ಆದರೆ, ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸಮ್ಮಿಶ್ರ ಸರ್ಕಾರ ಭದ್ರ: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಒಪ್ಪಂದದಂತೆ ಸರ್ಕಾರ ರಚನೆಯಾಗಿದ್ದು, ಇದು ಗಟ್ಟಿಯಾಗಿರುತ್ತದೆ. ಬಿಜೆಪಿಯವರು ಎಲ್ಲ ವಿಚಾರದಲ್ಲೂ ರಾಜಕೀಯ ಮಾಡುತ್ತಾರೆ. ಸರ್ಕಾರ ಅತಂತ್ರಗೊಳಿಸಲು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಮಹದಾಯಿ, ಸಾಲ ಮನ್ನಾ, ಕೊಡಗು ಸಂತ್ರಸ್ತರಿಗೆ ಪರಿಹಾರ ಇನ್ನಿತರ ವಿಚಾರದಲ್ಲಿ ಬಿಜೆಪಿಯವರು ಕೇಂದ್ರದ ಮೇಲೆ ಒತ್ತಡ ತಂದು ನ್ಯಾಯ ಕೊಡಿಸಬೇಕಿತ್ತು. ಬಿಜೆಪಿಯರ ಹೋರಾಟ ಜನಪರವಾದದ್ದಲ್ಲ. ಅಧಿಕಾರಕ್ಕಾಗಿ ಮಾತ್ರ ಹೋರಾಟ ನಡೆಸುತ್ತಾರೆ ಎಂದು ಆರೋಪಿಸಿದರು.
ಬಲಪಂಥೀಯವಾದ ಉಗ್ರವಾಗುತ್ತಿದೆ: ದೇಶದಲ್ಲಿ ಬಲಪಂಥೀಯ ವಾದ ಉಗ್ರ ಮಟ್ಟಕ್ಕೆ ಹೋಗುತ್ತಿದೆ. ತಮ್ಮ ಅಭಿಪ್ರಾಯವನ್ನು ಒಪ್ಪದವರನ್ನು ಮುಗಿಸುವ ಮಟ್ಟತಲುಪುತ್ತಿದೆ. ಯುವಕರು ಕೊಲೆ ಮಾಡುವಷ್ಟುಧೈರ್ಯ ತಂದುಕೊಂಡಿದ್ದಾರೆ. ಇದಕ್ಕೆ ಪ್ರೋತ್ಸಾಹ ನೀಡುತ್ತಿರುವ ಸರ್ಕಾರವನ್ನು ತೆಗೆಯಬೇಕಿದೆ ಎಂದಷ್ಟೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಐಸಿಸ್ ಭಾರತದಲ್ಲಿ ಹುಟ್ಟುತ್ತಿದೆ ಎಂದು ಹೇಳಿಲ್ಲ ಎಂದು ತಿಳಿಸಿದರು.
ದೇಶದಲ್ಲಿ ಸಮಾಜ ಒಡೆಯುವ, ಕೋಮು ಭಾವನೆ ಕೆರಳಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ದಾಬೋಲ್ಕರ್, ಪಾನ್ಸರೆ, ಗೌರಿ ಲಂಕೇಶ್ ಹತ್ಯೆಯ ಹಿಂದೆ ಒಂದೇ ಸಂಘಟನೆ ಇರುವ ಬಗ್ಗೆ ಕಾಂಗ್ರೆಸ್ ಈ ಹಿಂದೆಯೇ ಸಂಶಯ ವ್ಯಕ್ತಪಡಿಸಿದಾಗ ಬಿಜೆಪಿ ವಿರೋಧಿಸಿತ್ತು. ತನಿಖೆ ನಡೆದಂತೆ ನಿಜವಾಗುತ್ತಿದೆ. ಯಾವ ಸಂಘಟನೆ ಎಂದು ನಾವೀಗಲೆ ಹೇಳುವುದಿಲ್ಲ. ತನಿಖೆ ಮುಂದುವರಿದು ಸತ್ಯ ಇನ್ನಷ್ಟುಬೆಳಕಿಗೆ ಬರಲಿದೆ ಎಂದರು.
