ಆಟೋ ಚಾಲಕನ ಮನೆಯಲ್ಲಿ ಬಿಎಸ್‌ವೈ: ಇತರೆ ನಾಯಕರಿಂದಲೂ ಸ್ಲಂವಾಸ

BSY to spend a night in Bengaluru slum
Highlights

ರಾಜ್ಯದಲ್ಲಿನ ಕೊಳಗೇರಿ ಪ್ರದೇಶಗಳ ಸಮಸ್ಯೆ ಅರಿಯಲು ಬಿಜೆಪಿ ನಾಯಕರು ಕೊಳಗೇರಿ ಪ್ರದೇಶಗಳಲ್ಲಿ ವಾಸ್ತವ್ಯ ಆರಂಭಿಸಿದ್ದು, ಇದರ ಭಾಗವಾಗಿ ಬೆಂಗಳೂರಿನ ಲಕ್ಷ್ಮಣಪುರಿ ಕೊಳಗೇರಿ ಪ್ರದೇಶದ ಆಟೋ ಚಾಲಕರೊಬ್ಬರ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಿದ್ದರು.

ಬೆಂಗಳೂರು : ರಾಜ್ಯದಲ್ಲಿನ ಕೊಳಗೇರಿ ಪ್ರದೇಶಗಳ ಸಮಸ್ಯೆ ಅರಿಯಲು ಬಿಜೆಪಿ ನಾಯಕರು ಕೊಳಗೇರಿ ಪ್ರದೇಶಗಳಲ್ಲಿ ವಾಸ್ತವ್ಯ ಆರಂಭಿಸಿದ್ದು, ಇದರ ಭಾಗವಾಗಿ ಬೆಂಗಳೂರಿನ ಲಕ್ಷ್ಮಣಪುರಿ ಕೊಳಗೇರಿ ಪ್ರದೇಶದ ಆಟೋ ಚಾಲಕರೊಬ್ಬರ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಿದ್ದರು.

ಶನಿವಾರ ರಾತ್ರಿ 8.30ರ ಸುಮಾರಿಗೆ ಲಕ್ಷ್ಮಣಪುರಿ ಕೊಳಗೇರಿ ಪ್ರದೇಶಕ್ಕೆ ಆಗಮಿಸಿದ ಯಡಿಯೂರಪ್ಪ ಅವರಿಗೆ ಆರತಿ ಬೆಳಗುವ ಮೂಲಕ ಪೂರ್ಣ ಕುಂಭದೊಂದಿಗೆ ಸ್ವಾಗತ ನೀಡಲಾಯಿತು. ಬಳಿಕ ಅವರು ಅಲ್ಲಿಯೇ ಇರುವ ಮಾರಿಯಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಇದೇ ವೇಳೆ, ಮೈಸೂರಿನ ಕ್ಯಾತಮಾರನಹಳ್ಳಿಯ ಕೊಳಗೇರಿಯಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಹುಬ್ಬಳ್ಳಿಯ ಆದರ್ಶನಗರದ ಕೊಳಗೇರಿಯಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಶಿವಮೊಗ್ಗದ ಕೊಳಗೇರಿಯಲ್ಲಿ ವಿಧಾನಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ವಾಸ್ತವ್ಯ ಮಾಡಿದರು.

ಹಬ್ಬದ ವಾತಾವರಣ: ಯಡಿಯೂರಪ್ಪ ಅವರ ಆಗಮನದ ಹಿನ್ನೆಲೆಯಲ್ಲಿ ಆಟೋ ಚಾಲಕ ಮುನಿರತ್ನಂ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಮುನಿರತ್ನಂ ಅವರ ಮನೆಗೆ ಮೊದಲೇ ಪೇಂಟ್‌ ಮಾಡಿ ಸಿಂಗರಿಸಲಾಗಿತ್ತು.

ಯಡಿಯೂರಪ್ಪ ಅವರಿಗಾಗಿ ಮುನಿರತ್ನಂ ಅವರ ಮನೆಯಲ್ಲಿ ಸರಳವಾದ ಚಪಾತಿ, ಪಲ್ಯ, ಅನ್ನ, ರಸಂ, ಹಪ್ಪಳದ ಊಟ ಸಿದ್ಧಪಡಿಸಲಾಗಿತ್ತು. ಊಟದ ಬಳಿಕ ಕೊಳಗೇರಿ ನಿವಾಸಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು ಅಲ್ಲಿನ ನಿವಾಸಿಗಳ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದಕ್ಕೂ ಮುನ್ನ ಕಾರಿನಿಂದ ಇಳಿದು ಯಡಿಯೂರಪ್ಪ ಅವರು ಮುನಿರತ್ನಂ ಮನೆಗೆ ತೆರಳುವಾಗ ಸ್ಥಳೀಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಯಡಿಯೂರಪ್ಪ ಅವರು ಮನೆಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಮನೆಗೆ ಬಂದಿರುವುದು ಸಂತಸ ತರಿಸಿದೆ. ನಮಗೆ ಯಾವುದೇ ಬೇಡಿಕೆ ಇಲ್ಲ. ಅವರು ನಮ್ಮ ಮನೆಗೆ ಆಗಮಿಸಿರುವುದೇ ನಮ್ಮ ಭಾಗ್ಯ.

ಮುನಿರತ್ನಂ, ಆಟೋ ಚಾಲಕ

loader