ಮಹಾದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಪಾತ್ರಧಾರಿಗಳು. ಈ ನಾಟಕದ ಸ್ಕ್ರಿಪ್ಟ್ ಹಾಗೂ ನಿರ್ದೇಶನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಹುಬ್ಬಳ್ಳಿ (ಡಿ.26): ಮಹಾದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಪಾತ್ರಧಾರಿಗಳು. ಈ ನಾಟಕದ ಸ್ಕ್ರಿಪ್ಟ್ ಹಾಗೂ ನಿರ್ದೇಶನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸೋಮವಾರ ಗದಗ ಸಮಾವೇಶ ಹಾಗೂ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಈ ವಿಷಯ ಪ್ರಸ್ತಾಪಿಸಿದ ಅವರು, ನಾನು 3 ಬಾರಿ ಪತ್ರ ಬರೆದರೂ ಉತ್ತರ ಕೊಡದ ಪರ್ರಿಕ್ಕರ್ ಈಗ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯುವ ಮೂಲಕ ನಾಟಕ ಮಾಡಿದ್ದಾರೆ.
ಈ ನಾಟಕದ ಸ್ಕ್ರಿಪ್ಟ್ ಹಾಗೂ ನಿರ್ದೇಶನ ಅಮಿತ್ ಶಾ ಅವರದ್ದು, ಗೋವಾ ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಪಾತ್ರಧಾರಿ ಗಳಾಗಿದ್ದಾರೆ. ಮಹಾದಾಯಿ ವಿಚಾರದಲ್ಲಿ ಬಹಳ ಚೆನ್ನಾಗಿ ಸ್ಕ್ರಿಪ್ಟ್ ಮಾಡಿ ನಾಟಕ ಹೆಣೆದಿದ್ದಾರೆ. ಜನ ಈಗಾಗಲೇ ಅವರ ನಾಟಕವನ್ನು ಅರ್ಥ ಮಾಡಿಕೊಂಡಿದ್ದು, ಅವರಿಗೆ ಜನರೇ ಸರಿಯಾದ ಬುದ್ಧಿ ಕಲಿಸಲಿದ್ದಾರೆ ಎಂದು ಲೇವಡಿ ಮಾಡಿದರು.
ಪರ್ರಿಕರ್‌ಗೆ ಸವಾಲು: ಇದೇ ವೇಳೆ ಪರ್ರಿಕರ್'ಗೆ ಸವಾಲು ಹಾಕಿದ ಸಿದ್ದರಾಮಯ್ಯ, ಮಹದಾಯಿ ನೀರು ಬಿಡಲು ಅವರು ಒಪ್ಪಿದ್ದೇ ನಿಜವಾದರೆ ನ್ಯಾಯಾಧಿಕರಣಕ್ಕೆ ಪ್ರಮಾಣ ಪತ್ರ ಸಲ್ಲಿಸಲಿ ಎಂದು ಹೇಳಿದರು. ಗೋವಾ ಸಿಎಂ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ.
ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿಯಾದ ನನಗೆ ಪತ್ರ ಬರೆಯಬೇಕಿತ್ತು. ಆದರೆ ಅದನ್ನು ಅವರ ಪಕ್ಷದ ರಾಜ್ಯಾಧ್ಯಕ್ಷರಿಗೆ ಬರೆದಿದ್ದಾರೆ. ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರವನ್ನು ನ್ಯಾಯಾಧಿಕರಣಕ್ಕೆ ಸಲ್ಲಿಸಲು ಅವಕಾಶವಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಬ್ಬ ಪಕ್ಷದ ಅಧ್ಯಕ್ಷರಿಗೆ ಬರೆದಿರುವ ಪತ್ರವನ್ನು ಸಲ್ಲಿಸಲು ಕಾನೂನಲ್ಲಿ ಅವಕಾಶವಿಲ್ಲ ಎಂದರು.
ಶೆಟ್ಟರ್‌ಗೇನು ಗೊತ್ತು ಕಾನೂನು?: ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರನ್ನೂ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಅವರು, ನಾನು ವಕೀಲಗಿರಿ ಮಾಡಿದವ. ಯಡಿಯೂರಪ್ಪ, ಶೆಟ್ಟರ್‌ಗೇನು ಗೊತ್ತು ಕಾನೂನು. ಶೆಟ್ಟರ್ ಕಾನೂನು ಪದವಿ ಪಡೆದಿದ್ದರೂ ವಕೀಲಗಿರಿ ಮಾಡಿಲ್ಲ. ಬೇರೆ ಪಕ್ಷದ ಅಧ್ಯಕ್ಷರಿಗೆ ಬರೆದ ಪತ್ರ ನ್ಯಾಯಾಧಿಕರಣದಲ್ಲಿ ಊರ್ಜಿತವಾಗಲ್ಲ ಎಂದರು.
ಮಹದಾಯಿ ಸಮಸ್ಯೆ ಪರಿಹಾರ ವಿಷಯವಾಗಿ ಈಗಾಗಲೇ ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ಸ್ಥಳ, ದಿನಾಂಕ ಅವರೇ ನಿಗದಿ ಮಾಡ್ಲಿ, ಎಲ್ಲಿಗೆ ಕರೆದ್ರೂ ನಾನು ಹೋಗಲು ಸಿದ್ಧ ಎಂದು ಹೇಳಿದ್ದೇನೆ. ಚೆಂಡು ಮತ್ತೆ ನಿಮ್ಮ ಅಂಗಳದಲ್ಲೇ ಇದೆ ಎಂದು ಹೇಳಿದರು.
