ಬೆಂಗಳೂರು/ನವದೆಹಲಿ [ಆ.24]: ಸಚಿವ ಸಂಪುಟದ ಮೊದಲ ಹಂತದ ವಿಸ್ತರಣೆಯಾಗಿ ಐದು ದಿನವಾದರೂ 17 ಸಚಿವರಿಗೆ ಖಾತೆಗಳ ಹಂಚಿಕೆ ವಿಳಂಬವಾಗಿದ್ದರ ಮಧ್ಯೆಯೇ ಶನಿವಾರ ಖಾತೆ ಹಂಚಿಕೆ ಮಾಡುವುದಾಗಿ ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ರಾತ್ರಿ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಅವರು ಶುಕ್ರವಾರ ರಾತ್ರಿ ನಗರಕ್ಕೆ ವಾಪಸಾಗಿದ್ದು, ಶನಿವಾರ ಖಾತೆ ಹಂಚಿಕೆ ಅಂತಿಮಗೊಳಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದರು. 

ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿ ಮಾಡಿ ಸುದೀರ್ಘ ವಾಗಿ ಚರ್ಚೆ ನಡೆಸಿದ್ದೇನೆ ಎಂದರು. ಆದರೆ, ದೆಹಲಿಯಲ್ಲಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡುವ ಪ್ರಯತ್ನ ಸಫಲವಾಗಿಲ್ಲ ಎಂಬ ಮಾಹಿತಿ ಆರಂಭದಲ್ಲಿ ಕೇಳಿಬಂದಿತ್ತು. 

ಅವರ ಬದಲು ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಚರ್ಚಿಸಿದ್ದಾರೆ. ಹೀಗಾಗಿ, ಶನಿವಾರ ಖಾತೆಗಳ ಹಂಚಿಕೆ  ಅಂತಿಮಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿತ್ತು. ಈ ನಡುವೆ ಖಾತೆ ಹಂಚಿಕೆಯಲ್ಲಿ ಕೆಲ ಅಚ್ಚರಿಗಳು ಕಾದಿದ್ದು, ಪ್ರಮುಖ ಖಾತೆಗಳ ಬಗ್ಗೆ ನಿರೀಕ್ಷೆ ಇಟ್ಟುಕೊಂಡ ಹಿರಿಯ ಸಚಿವರಿಗೆ ನಿರಾಸೆ ಆಗಬಹುದು ಎನ್ನಲಾಗಿದೆ. 

ಶನಿವಾರ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಇದೇ ವೇಳೆ ದೆಹಲಿಯಲ್ಲೇ ಇರುವ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅನರ್ಹ ಶಾಸಕರೊಂದಿಗೂ ಯಡಿಯೂರಪ್ಪ ಅವರು ಮುಕ್ತವಾಗಿ ಚರ್ಚೆ ನಡೆಸುವ ಮೂಲಕ ಖಾತೆಗಳ ಹಂಚಿಕೆಗೆ ಎದುರಾಗಿದ್ದ ಅಡಚಣೆ ನಿವಾರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಸರ್ಕಾರದ ಪ್ರಮುಖ ಖಾತೆಗಳ ಪೈಕಿ ಅರ್ಧದಷ್ಟು ಬಿಜೆಪಿ ಸಚಿವರಿಗೆ ಈಗ ನೀಡಿದರೂ ಇನ್ನುಳಿದ ಅರ್ಧ ಪ್ರಮುಖ ಖಾತೆಗಳನ್ನು ಮುಂದಿನ ದಿನಗಳಲ್ಲಿ ಸಂಪುಟ ಸೇರಲಿರುವ ಅನರ್ಹ ಶಾಸಕರಿಗೆ ನೀಡಲು ನಿರ್ಧಾರ ವಾಗಿದೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಲಭಿಸುತ್ತಿರುವ ಒಂದು ಮಾಹಿತಿ ಪ್ರಕಾರ, ಶನಿವಾರ ಬಿಜೆಪಿಯ 17 ಸಚಿವರಿಗೂ ಖಾತೆಗಳನ್ನು ಹಂಚಿಕೆ ಮಾಡುವ ಸಾಧ್ಯತೆಯಿದೆ. 

ಮತ್ತೊಂದು ಮಾಹಿತಿ ಪ್ರಕಾರ, ಸೋಮವಾರ ಸುಪ್ರಿಂಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ನಿರೀಕ್ಷೆಯಿ ರುವ ಅನರ್ಹ ಶಾಸಕರ ಪ್ರಕರಣದ ನಡೆ ಗಮನಿಸಿ ಹಂಚಿಕೆ ಮಾಡುವ ಸಂಭವವೂ ಇದೆ. ಅಂದರೆ, ಸೋಮವಾರದವರೆಗೆ ಕಾದು ನೋಡಬಹುದು. ಶನಿವಾರ ಬೆಳಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಖಾತೆಗಳ ಹಂಚಿಕೆ ಅಂತಿಮಗೊಳಿಸಬಹುದು.