ಮಂಗಳೂರು :  ಈ ಹಿಂದೆ ಜೆಡಿಎಸ್‌ ಜೊತೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಸಿದಾಗ 20 ತಿಂಗಳ ಬಳಿಕ ಬಿಜೆಪಿಗೆ ಅಧಿಕಾರ ಹಸ್ತಾಂತರ ನಡೆಸದೆ ದ್ರೋಹ ಎಸಗುವ ಶಂಕೆ ಮೊದಲೇ ಬಂದಿತ್ತು. ಇದು ಮುಂದೆ ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನೆರವಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಬಿಜೆಪಿ ಕ್ಲಸ್ಟರ್‌ ಕೇಂದ್ರ ಪ್ರಮುಖರ ಸಮಾವೇಶದಲ್ಲಿ ಮಾತನಾಡಿ, ಜೆಡಿಎಸ್‌ ಜೊತೆ ಮೈತ್ರಿಗೆ ಅಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ರಾಜನಾಥ್‌ ಸಿಂಗ್‌ ಅವರೇ ಒಪ್ಪಿಗೆ ಸೂಚಿಸಿದ್ದರು. ಆದರೆ, ಜೆಡಿಎಸ್‌ ಅಧಿಕಾರ ಹಸ್ತಾಂತರಿಸದೆ ವಂಚಿಸಬಹುದು ಎಂಬ ಬಗ್ಗೆ ಮೊದಲೇ ಶಂಕೆ ವ್ಯಕ್ತಪಡಿಸಿದ್ದರು. ಜೆಡಿಎಸ್‌ ಧೋರಣೆ ಬಗ್ಗೆ ಹಿರಿಯರಾದ ವಾಜಪೇಯಿ, ಆಡ್ವಾಣಿ ಹಾಗೂ ರಾಜನಾಥ್‌ ಸಿಂಗ್‌ಗೆ ಆಗಲೇ ಅನುಮಾನ ಬಂದಿತ್ತು. ಆದರೂ ಅಧಿಕಾರ ಹಸ್ತಾಂತರಿಸದಿದ್ದರೆ, ಮುಂದೆ ಬಹುಮತದಲ್ಲಿ ಬಿಜೆಪಿ ಅಧಿಕಾರ ನಡೆಸಲು ಸುಲಭದ ದಾರಿಯಾಗುತ್ತದೆ ಎಂಬ ಕಾರಣಕ್ಕೆ ಮೈತ್ರಿಗೆ ಒಪ್ಪಿಕೊಂಡಿದ್ದೆವು. ನಿರೀಕ್ಷೆಯಂತೆ ಜೆಡಿಎಸ್‌ ಅಧಿಕಾರ ಹಸ್ತಾಂತರಿಸದೆ ಕೈಕೊಟ್ಟಿತು. ನಾನು ರಾಜೀನಾಮೆ ನೀಡಿ ಚುನಾವಣೆಗೆ ಹೋದೆ. ಜನತೆ ಬೆಂಬಲಿಸಿ ಬಿಜೆಪಿಗೆ ಅಧಿಕಾರ ಚುಕ್ಕಾಣಿ ನೀಡಿದರು ಎಂದು ಹೇಳಿದರು.

ರಾಜ್ಯ ಮುಖಂಡರ ಜತೆ ಚರ್ಚೆ:  ರಾಜ್ಯದಲ್ಲಿ ಲೋಕಸಭಾ ಟಿಕೆಟ್‌ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಟಿಕೆಟ್‌ ಹಂಚಿಕೆ ಬಗ್ಗೆ ನಾನು ಮತ್ತೆ ನಮ್ಮ ರಾಜ್ಯದ ಮುಖಂಡರ ಜೊತೆ ಚರ್ಚಿಸಿ ದೆಹಲಿ ಹೋಗಿ ಫೈನಲ್‌ ಮಾಡುತ್ತೇವೆ ಎಂದು ಹೇಳಿದರು.

ಸುಮಲತಾ ಬೆಂಬಲಿಸುವ ತೀರ್ಮಾನವಾಗಿಲ್ಲ:  ಲೋಕಸಭೆಗೆ ಸ್ಪರ್ಧಿಸಲು ಅಂಬರೀಷ್‌ ಅವರ ಪತ್ನಿ ಸುಮಲತಾಗೆ ಸೀಟು ಸಿಗುವುದು, ಬಿಡುವುದು ಜೆಡಿಎಸ್‌- ಕಾಂಗ್ರೆಸ್‌ಗೆ ಬಿಟ್ಟವಿಷಯ. ಆದರೆ, ಸುಮಲತಾ ಬಗ್ಗೆ ಹಗುರವಾದ ಮಾತು ಮೆಚ್ಚುವಂಥದ್ದಲ್ಲ. ಈ ಬಗ್ಗೆ ಬೆದರಿಕೆ ಹಾಕುವುದು ಮತ್ತು ಹಗುರವಾಗಿ ಮಾತನಾಡುವುದಕ್ಕೆ ಮಂಡ್ಯ ಜನತೆ ಉತ್ತರ ಕೊಡುತ್ತಾರೆ ಎಂದರು. ಸುಮಲತಾ ಅವರನ್ನು ಬಿಜೆಪಿಗೆ ಸೆಳೆಯುವ ಯಾವುದೇ ಪ್ರಯತ್ನವನ್ನು ನಾವು ಮಾಡಿಲ್ಲ. ಅವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಬೆಂಬಲಿಸುವ ಬಗ್ಗೆಯೂ ನಿರ್ಧಾರವಾಗಿಲ್ಲ ಎಂದು ಹೇಳಿದರು.