ಬೆಂಗಳೂರು :  ರಾಜ್ಯದಲ್ಲಿ ನೀವು ಅಧಿಕಾರದಲ್ಲಿದ್ದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂಬುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮರೆಯಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ನೀವು ಅಧಿಕಾರ ನಡೆಸುತ್ತಿರಬಹುದು. ಆದರೆ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವಿದೆ. ಏನು ಬೇಕಾದರೂ ಮಾಡಬಹುದು ಎಂಬುದನ್ನು ಮರೆತಿರುವಂತಿದೆ ಎಂದು ಹೇಳಿದರು.

ನಾನು ನನ್ನ ಇತಿಮಿತಿ ಏನು ಎಂಬುದನ್ನು ಅರಿತುಕೊಂಡೇ ಮಾತನಾಡಿದ್ದೇನೆ. ಹದ್ದುಮೀರಿ ಮಾತನಾಡುತ್ತಿರುವುದು ನೀವು. ನಿಮ್ಮ ಈ ಧಮ್ಕಿಗೆ ನಾನು ಹೆದರುವುದಿಲ್ಲ, ಬಗ್ಗುವುದಿಲ್ಲ. ಅದೇನು ಮಾಡಿಕೊಳ್ಳುತ್ತೀರೊ ಮಾಡಿಕೊಳ್ಳಿ ಎಂದು ಸವಾಲನ್ನೂ ಎಸೆದರು.

ಮುಖ್ಯಮಂತ್ರಿ ಸ್ಥಾನವಾಗಲಿ ಅಥವಾ ಅಧಿಕಾರ ಯಾರಿಗೂ ಶಾಶ್ವತವಲ್ಲ. ಸೇಡಿನ ರಾಜಕಾರಣಕ್ಕೆ ನೀವು ಮುನ್ನುಡಿ ಬರೆದಿದ್ದೀರಿ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದರೆ ನಾನು ಸುಮ್ಮನೆ ಕೈ ಕಟ್ಟಿಕೂರುವುದಿಲ್ಲ. ನನಗೂ ರಾಜಕೀಯ ಮಾಡುವುದು ಗೊತ್ತು. ನೀವು ಏನೇ ಮಾಡಿದರೂ ಅದಕ್ಕೆ ಪ್ರತಿಯಾಗಿ ನಮಗೂ ಏನು ಮಾಡಬೇಕೆಂಬುದು ಗೊತ್ತಿದೆ. ನಾನು ಅಧಿಕಾರದಲ್ಲಿದ್ದ ವೇಳೆ ಎಂದಿಗೂ ನಾನು ಸೇಡಿನ ರಾಜಕಾರಣ ಮಾಡಲಿಲ್ಲ. ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಇದನ್ನೇ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಶಿವರಾಮ ಕಾರಂತ ಬಡಾವಣೆಯಲ್ಲಿ ನಾನು ಕಾನೂನು ಬಾಹಿರವಾಗಿ ಯಾವುದೇ ರೀತಿ ಕ್ರಮ ಕೈಗೊಂಡಿದ್ದರೆ ತನಿಖಾ ಸಂಸ್ಥೆಗಳು ನಿಮ್ಮ ಕೈಯಲ್ಲೇ ಇವೆ. ತನಿಖೆ ಮಾಡಿ ಕ್ರಮ ಕೈಗೊಳ್ಳಲು ಮೀನಾಮೇಷವೇಕೆ ಎಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.

ಆ ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಷನ್‌ ಬಗ್ಗೆ ತನಿಖೆ ನಡೆಸಿದರೆ ಸತ್ಯಾಂಶ ಜನರಿಗೆ ತಿಳಿಯಲಿದೆ. ಈ ಅಪ್ಪ-ಮಕ್ಕಳು ಮೈಸೂರಿನಲ್ಲಿ ಎಷ್ಟುಸೈಟು ಮಾಡಿಕೊಂಡಿದ್ದಾರೆ ಎಂಬುದು ನಮಗೂ ಗೊತ್ತಿದೆ. ಎಲ್ಲವನ್ನು ದಾಖಲೆಗಳ ಸಮೇತ ಬಿಡುಗಡೆ ಮಾಡುತ್ತೇವೆ. ನಿಮ್ಮ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂದು ಯಡಿಯೂರಪ್ಪ ಎಚ್ಚರಿಸಿದರು.