ಬೆಂಗಳೂರು (ಜೂ. 24): ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರೊದಗಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿರುವುದು ಸರಿಯಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಡಿಪಿಆರ್‌ ಮಾಡುವುದನ್ನು ಕೈಬಿಟ್ಟು ವಾಸ್ತವಾಂಶದ ಆಧಾರದ ಮೇಲೆ ಬೆಂಗಳೂರಿಗೆ ನೀರು ತರುವ ಯೋಜನೆಯನ್ನು ರೂಪಿಸಲಿ. ಈಗಾಗಲೇ ಯೋಜನೆ ವಿರೋಧಿಸಿ ಶಿವಮೊಗ್ಗದ ಜನ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ರಾಘವೇಶ್ವರ ಶ್ರೀ ವಿರೋಧ 

ಶರಾವತಿ ನೀರನ್ನು ಬೆಂಗಳೂರಿಗೆ ತರುವ ರಾಜ್ಯ ಸರ್ಕಾರದ ಪ್ರಸ್ತಾವಿತ ಯೋಜನೆ ಅವೈಜ್ಞಾನಿಕ ಹಾಗೂ ಅತಾರ್ಕಿಕವಾಗಿದೆ. ವಿಶ್ವದಲ್ಲಿಯೇ ಅಪರೂಪದ ಜೀವವೈವಿಧ್ಯ ತಾಣ ಎನಿಸಿರುವ ಪಶ್ಚಿಮಘಟ್ಟಪರಿಸರಕ್ಕೆ ಈ ಯೋಜನೆ ಮಾರಕವಾಗಿರುವುದರಿಂದ ಕೂಡಲೇ ಈ ಯೋಜನೆಯನ್ನು ಕೈ ಬಿಡಬೇಕು ಎಂದು ರಾಮಚಂದ್ರಾಪುರಮಠದ ರಾಘವೇಶ್ವರಭಾರತೀ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಸರ್ಕಾರವು ಇಂತಹ ಕೋಟ್ಯಂತರ ರು. ವೆಚ್ಚದ ಯೋಜನೆ ಬದಲಾಗಿ ಮಳೆ ನೀರು ಕೊಯ್ಲಿನಂತಹ ಪರ್ಯಾಯ ವಿಧಾನದ ಮೂಲಕ ರಾಜಧಾನಿಯ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ, ಪರಿಸರ ಮತ್ತು ಅಭಿವೃದ್ಧಿ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕಿದೆ. ಪ್ರಕೃತಿಗೆ ವಿರುದ್ಧವಾದ ಯಾವುದೇ ಯೋಜನೆಯಿಂದ ಸುಸ್ಥಿರತೆ ಸಾಧ್ಯವಿಲ್ಲ. ಆದ್ದರಿಂದ 400 ಕಿ.ಮೀ. ದೂರದಿಂದ ಸಮುದ್ರದಿಂದ ಒಂದೂವರೆ ಸಾವಿರ ಅಡಿ ಎತ್ತರದ ಬೆಂಗಳೂರಿಗೆ ನೀರು ತರುವ ಪ್ರಸ್ತಾವ ಕೈಬಿಡಬೇಕು. ಇದರ ಬದಲಾಗಿ ರಾಜಧಾನಿಯ ಅನಿಯಂತ್ರಿತ ಬೆಳವಣಿಗೆಯನ್ನು ತಡೆದು ಸುಸ್ಥಿರ ಅಭಿವೃದ್ಧಿ ಕಡೆಗೆ ಗಮನ ಹರಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಜಾರಿಯಾಗಿರುವ ಲಿಂಗನಮಕ್ಕಿ, ಕಾರ್ಗಲ್‌, ಚಕ್ರಾ, ಸಾವೇಹಕ್ಕಲು, ವಾರಾಹಿ, ಗೇರುಸೊಪ್ಪೆ, ಗಾಜನೂರು, ಭದ್ರಾ, ಮಾಣಿ, ನಾಗಝರಿ, ಕಾಳಿ ಯೋಜನೆಗಳಿಂದ ಜನರು ಅಪಾರ ಕಷ್ಟನಷ್ಟಅನುಭವಿಸಿದ್ದಾರೆ. ತನ್ನ ಧಾರಣ ಸಾಮರ್ಥ್ಯ ಮೀರಿದ ಯೋಜನೆಗಳಿಂದ ಪಶ್ಚಿಮಘಟ್ಟನಲುಗುತ್ತಿದೆ. ಹೀಗಿರುವಾಗ ಮತ್ತೊಂದು ಅಂತಹುದೇ ದುಬಾರಿ ಯೋಜನೆಯ ದುಸ್ಸಾಹಸ ಮಾಡುವ ಬದಲು ಮಳೆ ನೀರು ಕೊಯ್ಲಿನಂತಹ ಸುಸ್ಥಿರ ವಿಧಾನದ ಮೂಲಕ ನೀರಿನ ಸಮಸ್ಯೆ ಬಗೆಹರಿಸುವತ್ತ ಸರ್ಕಾರ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.