ಜಮ್ಮು[ಜು.24]: ಕಳೆದ ವರ್ಷ ಜೂನ್‌ 14ರಂದು ಈದ್‌ಮಿಲಾದ ಆಚರಣೆಗೆಂದು ಮನೆಗೆ ಬಂದಿದ್ದ ವೇಳೆ ಉಗ್ರರಿಂದ ಹತ್ಯೆಯಾಗಿದ ಯೋಧ ಔರಂಗಜೇಬ್‌ನ ಇಬ್ಬರೂ ಸೋದರರು ಇದೀಗ ಭಾರತೀಯ ಸೇನೆಗೆ ಸೇರಿದ್ದಾರೆ. ಜೊತೆಗೆ ತಮ್ಮ ಅಣ್ಣನ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದಾರೆ.

ಔರಂಗಜೇಬ್‌ರ ಸಹೋದರರಾದ ಮೊಹಮ್ಮದ್‌ ತಾರೀಖ್‌(23) ಮತ್ತು ಮೊಹಮ್ಮದ್‌ ಶಬೀರ್‌(21) ರಜೋರಿ ಘಟಕದ ಸೇನೆಯಲ್ಲಿ ನೋಂದಣಿಯಾಗಿದ್ದು, ಅವರಿಗೆ ಪಂಜಾಬ್‌ ರೆಜಿಮೆಂಟ್‌ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ.

ಸೇನೆ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ತಾರಿಖ್‌, ‘ದೇಶಕ್ಕಾಗಿ ನಮ್ಮ ಅಣ್ಣ ಪ್ರಾಣವನ್ನೇ ತ್ಯಾಗ ಮಾಡಿದ. ಅವರ ಹಾದಿಯಲ್ಲೇ ನಾವು ಸಾಗುತ್ತೇವೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಸಂದರ್ಭ ಒದಗಿ ಬಂದರೂ ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ನನ್ನ ಅಣ್ಣ ಹಾಗೂ ಪಂಜಾಬ್‌ ರೆಜಿಮೆಂಟ್‌ ಹೆಮ್ಮೆ ಪಡುವಂತೆ ಸೇವೆ ಸಲ್ಲಿಸುವುದಾಗಿ’ ಹೇಳಿದರು. ಮತ್ತೊಂದು ವಿಶೇಷ ಎಂದರೆ, ಔರಂಗಜೇಬ್‌ ಅವರ ತಂದೆ ಹನೀಫ್‌ ಅವರು ಸಹ ಸೇನೆಯಲ್ಲಿದ್ದರು.