ಪ್ರಾಜೆಕ್ಟ್ ಹಿಮಾಂಕ್’ನಡಿ 19,300 ಅಡಿ ಎತ್ತರದಲ್ಲಿ ಕೈಗೊಂಡ ಚಿಸುಮ್ಲೆ ಮತ್ತು ಡೆಮ್‌ಚೋಕ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯತಂತ್ರದ ಭಾಗವಾದ 86 ಕಿ.ಮೀ ಉದ್ದದ ಈ ರಸ್ತೆ ನಿರ್ಮಾಣ ಕಾಮಕಾರಿ ಪೂರ್ಣಗೊಂಡಿದೆ.

ಶ್ರೀನಗರ(ನ.03): ಮನುಷ್ಯರ ಉಸಿರಾಟಕ್ಕೂ ಕಷ್ಟಪಡಬೇಕಾದ ಜಮ್ಮು-ಕಾಶ್ಮೀರದ ಲಡಾಖ್ ಪ್ರಾಂತ್ಯದಲ್ಲಿ ವಾಹನ ಸಂಚರಿಸಬಹುದಾದ ವಿಶ್ವದ ಅತಿ ಎತ್ತರದ ರಸ್ತೆಯನ್ನು ಗಡಿ ರಸ್ತೆ'ಗಳ ನಿರ್ಮಾಣ ಸಂಸ್ಥೆ(ಬಿಆರ್‌ಒ) ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವಿಶೇಷವೆಂದರೆ ಇಂಥದ್ದೊಂದು ರಸ್ತೆ ಕಾರ್ಯ ನಡೆದಿರುವುದು ಕನ್ನಡಿಗ ಎಂಜಿನಿಯರ್, ಬ್ರಿಗೇಡಿಯರ್ ಡಿ.ಎಂ.ಪೂರ್ವಿಮಠ್ ಅವರ ಸಾರಥ್ಯದಲ್ಲಿ ‘ಪ್ರಾಜೆಕ್ಟ್ ಹಿಮಾಂಕ್’ನಡಿ 19,300 ಅಡಿ ಎತ್ತರದಲ್ಲಿ ಕೈಗೊಂಡ ಚಿಸುಮ್ಲೆ ಮತ್ತು ಡೆಮ್‌ಚೋಕ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯತಂತ್ರದ ಭಾಗವಾದ 86 ಕಿ.ಮೀ ಉದ್ದದ ಈ ರಸ್ತೆ ನಿರ್ಮಾಣ ಕಾಮಕಾರಿ ಪೂರ್ಣಗೊಂಡಿದೆ.

ಲೇಹ್‌ನಿಂದ 230 ಕಿ.ಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಬೇಸಿಗೆ ಅವಧಿಯಲ್ಲೂ ತಾಪಮಾನ ಮೈನಸ್ 10-20 ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ. ಚಳಿಗಾಲದಲ್ಲಿ ತಾಪಮಾನ ಮೈನಸ್ 40 ಡಿಗ್ರಿಗೆ ಕುಸಿಯುತ್ತದೆ. ಇಂಥ ಸ್ಥಳದಲ್ಲಿ ಕಾರ್ಯನಿರ್ವ ಹಿಸುವಾಗ ಸಿಬ್ಬಂದಿ ಸಾಮರ್ಥ್ಯ ಶೇ.50ರಷ್ಟು ಕುಸಿಯುತ್ತದೆ. ಇದರ ಹೊರತಾಗಿಯೂ ನಾವು ಯಶಸ್ವಿಯಾಗಿ ಯೋಜನೆ ಪೂರೈಸಿದ್ದೇವೆ ಎಂದು ಪೂರ್ವಿಮಠ್ ಹೇಳಿದ್ದಾರೆ.