ಲಂಡನ್[ಸೆ.16]: ತನ್ನ ಹುಟ್ಟುಹಬ್ಬದ ಸಂಭ್ರಮದ ವೇಳೆ ತಿಂದ ಆಹಾರದಿಂದ ಯಾರಾದರೂ ಸಾವನ್ನಪ್ಪುತ್ತಾರೆ ಎಂಬುವುದು ಊಹಿಸಲೂ ಸಾಧ್ಯವಿಲ್ಲ. ಆದರೀಗ ಇಂತಹ ಘಟನೆ ನಡೆದಿದ್ದು, ಬ್ರಿಟಿಷ್ ಬರ್ಗರ್ ಚೇನ್ ಬೈರೋನ್ ನಲ್ಲಿ ಚಿಕನ್ ಬರ್ಗರ್ ತಿಂದ 18 ವರ್ಷದ ಓವನ್ ಕೆರಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. 

ಹೌದು ಹುಟ್ಟುಹಬ್ಬದಂದು ಬರ್ಗರ್ ಚೇನ್ ಬೈರೋನ್‌ಗೆ ತೆರಳಿದ್ದ ಕೆರಿ, ಅಲ್ಲಿನ ಸಿಬ್ಬಂದಿಯಲ್ಲಿ ತನಗೆ ಹಾಲಿನಿಂದ ತಯಾರಾದ ಆಹಾರ ತಿಂದರೆ ಅಲರ್ಜಿಯುಂಟಗುತ್ತದೆ ಎಂದು ತಿಳಿಸಿದ್ದಾನೆ. ಆದರೆ ಸಿಬ್ಬಂದಿ ಮಾತ್ರ ಆತನ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಕೆರಿ ತನ್ನ ಹುಟ್ಟುಹಬ್ಬದಂದೇ ಕೊನೆಯುಸಿರೆಳೆದಿದ್ದಾನೆ.

ಕೆರಿ ಮರಣೋತ್ತರ ಪರೀಕ್ಷೆ ನಡೆಸಿದ ಅಧಿಕಾರಿ ಪ್ರತಿಕ್ರಿಯಿಸಿದ್ದು, 'ಈ ಘಟನೆ 2017ರ ಏಪ್ರಿಲ್ 22ರಂದು ನಡೆದಿದೆ. ಅಂದು ಕೆರಿ ತನ್ನ 18ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ತನ್ನ ಪ್ರೇಯಸಿಯೊಂದಿಗೆ ಊಟಕ್ಕೆಂದು ಆಗಮಿಸಿದ್ದ ಕೆರಿ ರೆಸ್ಟೋರೆಂಟ್ ಸಿಬ್ಬಂದಿ ಆಹಾರ ತಂದಿಡುವ ವೇಳೆ ತನಗೆ ಹಾಲಿನಿಂದ ತಯಾರಿಸಿದ ಆಹಾರದಿಂದ ಅಲರ್ಜಿಯುಂಟಾಗುತ್ತದೆ ಎಂದು ತಿಳಿಸಿದ್ದಾನೆ. ಈ ವೇಳೆ ಆತನ ಮಾತನ್ನು ಅಷ್ಟೊಂದು ಗಂಭೀರವಾಗಿ ಸ್ವೀಕರಿಸದ ಸಿಬ್ಬಂದಿ ಆಹಾರ ಸಂಪೂರ್ಣ ಸುರಕ್ಷಿತವಾಗಿದೆ ಎಂದಿದ್ದಾರೆ. ಆದರೆ ರ್ಧ ಚಿಕನ್ ಬರ್ಗರ್ ತಿಂದು ಮುಗಿಸುವಷ್ಟರಲ್ಲಿ ಕೆರಿಗೆ ಅಲರ್ಜಿಯುಂಟಾಗಿರುವ ಲಕ್ಷಣಗಳು ಗೋಚರಿಸಿವೆ. ಕೆರಿಗೆ ತಾನು ತಿಂದ ಆಹಾರದಲ್ಲಿ ಮಸಾಲೆಯುಕ್ತ ಬಟರ್ ಮಿಲ್ಕ್ ಇದೆ ಎಂದು ತಿಳಿದಿರಲಿಲ್ಲ' ಎಂದು ತಿಳಿಸಿದ್ದಾರೆ.

ಊಟ ಮುಗಿಸಿದ ಕೆರಿ ಅಲ್ಲಿಂದ ತನ್ನ ಪ್ರೇಯಸಿಯೊಂದಿಗೆ ಲಂಡನ್ ಅಕ್ವೇರಿಯಂಗೆ ತೆರಳಿದ್ದಾರೆ. ಈ ವೇಳೆ ಸಮಸ್ಯೆ ಉಲ್ಭಣಿಸಿಕೊಂಡು ಆತನ ತನ್ನ ಪ್ರೇಯಸಿಯ ಮಡಿಲಲ್ಲೇ ಕುಸಿದು ಬಿದ್ದಿದ್ದಾನೆ. ವೈದ್ಯ ಸಿಬ್ಬಂದಿಗಳ ಸಹಾಯದಿಂದ ಕೆರಿಗೆ ಪ್ರಥಮ ಚಿಕಿತ್ಸೆ ನೀಡಲಾಯ್ತಾದರೂ 45 ನಿಮಿಷಗಳಲ್ಲಾತ ಕೊನೆಯುಸಿರೆಳೆದಿದ್ದಾನೆ. 

ಸದ್ಯ ಕೆರಿ ಕುಟುಂಬಸ್ಥರು ಇಂತಹ ಅಲರ್ಜಿಯುಂಟಾಗುವವರಿಗಾಗಿ ಸುರಕ್ಷಿತ ಆಹಾರ ತಯಾರಿಸಿಕೊಡಲು ಸರ್ಕಾರ ಹೊಸ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.