ಸ್ವತಂತ್ರ ಭಾರತದಲ್ಲಿ ನಿರ್ಮಾಣವಾದ ರೈಲ್ವೆ ಮೇಲ್ಸೇತುವೆಗಳಿಗಿಂತ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆಗಳು ಇನ್ನೂ ಹೆಚ್ಚು ಸುಸ್ಥಿತಿಯಲ್ಲಿವೆ ಎಂದು ಸಂಸದೀಯ ಸಮಿತಿಯೊಂದು ವರದಿ ನೀಡಿದೆ.

ನವದೆಹಲಿ: ಸ್ವತಂತ್ರ ಭಾರತದಲ್ಲಿ ನಿರ್ಮಾಣವಾದ ರೈಲ್ವೆ ಮೇಲ್ಸೇತುವೆಗಳಿಗಿಂತ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆಗಳು ಇನ್ನೂ ಹೆಚ್ಚು ಸುಸ್ಥಿತಿಯಲ್ಲಿವೆ ಎಂದು ಸಂಸದೀಯ ಸಮಿತಿಯೊಂದು ವರದಿ ನೀಡಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಒಳ ಒಪ್ಪಂದವೇ ಮೇಲ್ಸೇತುವೆಗಳ ಕಳಪೆ ಗುಣಮಟ್ಟಕ್ಕೆ ಕಾರಣ ಎಂದು ವರದಿಯಲ್ಲಿ ದೂಷಿಸಲಾಗಿದೆ.

ಸಾರ್ವಜನಿಕ ಲೆಕ್ಕ ಸಮಿತಿ ಶುಕ್ರವಾರ ಸಂಸತ್ತಿನಲ್ಲಿ ಭಾರತೀಯ ರೈಲ್ವೆ ವಲಯದ ಮೇಲ್ಸೇತುವೆಗಳ ನಿರ್ವಹಣೆ ಕುರಿತು ವರದಿ ಮಂಡನೆ ಮಾಡಿದ್ದು, ಇದರಲ್ಲಿ ರೈಲಿನಲ್ಲಿ ಪ್ರಯಾಣಿಸುವ ಸಾರ್ವಜನಿಕರ ಜೀವಕ್ಕೆ ಆಪತ್ತು ತಂದೊಡ್ಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ರೈಲ್ವೆ ಬ್ರಿಡ್ಜ್‌ಗಳ ನವೀಕರಣಕ್ಕಾಗಿ ಇ ಟೆಂಡರ್‌ ಕರೆಯಬೇಕು. ಇದರಿಂದ ನಂಬಿಕಸ್ತ ಮತ್ತು ಸ್ಪರ್ಧಾತ್ಮಕವಾದ ಕಂಪನಿಗಳು ಟೆಂಡರ್‌ನಲ್ಲಿ ಭಾಗಿಯಾಗಲು ಅನುಕೂಲವಾಗುತ್ತದೆ. ಅಲ್ಲದೆ, ರೈಲ್ವೆ ಬ್ರಿಡ್ಜ್‌ಗಳ ಗುಣಮಟ್ಟಕಾಪಾಡಲು ನೆರವಾಗುತ್ತದೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.

ಜತೆಗೆ, ಟೆಂಡರ್‌ ಪಡೆಯುವ ವೇಳೆ ತಾವು ವಾಗ್ದಾನ ನೀಡಿದಂತೆ ಹೆಚ್ಚು ಕಾಲ ಬಾಳಿಕೆ ಬಾರದ ಮೇಲ್ಸೇತುವ ನಿರ್ಮಿಸುವ ಕಂಪನಿಗಳನ್ನು ಮುಂದಿನ ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯವಾಗದಂತೆ, ಅವುಗಳನ್ನು ಡಿಬಾರ್‌ ಮಾಡಬೇಕು ಎಂದು ಸೂಚಿಸಲಾಗಿದೆ.