ಮುಂಬೈ (ಸೆ.14): ಭಾರತದಲ್ಲಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದ ಬ್ರಿಟನ್‌ ದಂಪತಿ ಆ ಮಗುವಿಗೆ ಪಾಸ್ಪೋರ್ಟ್‌ ಸಿಗದ ಹಿನ್ನೆಲೆಯಲ್ಲಿ ಅದನ್ನು ಭಾರತದಲ್ಲೇ ಬಿಟ್ಟು ಹೋಗುವ ಪರಿಸ್ಥಿತಿ ಎದುರಾಗಿದೆ. ಮಗುವಿಗೆ ಪಾಸ್ಪೋರ್ಟ್‌ ನಿರಾಕರಿಸಿರುವ ಬ್ರಿಟನ್‌ ಅಧಿಕಾರಿಗಳ ನಡೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಗುವಿನ ಪೋಷಕರು ಬ್ರಿಟನ್‌ ಮತ್ತು ಭಾರತ ಸರ್ಕಾರಕ್ಕೆ ಪತ್ರ ಬರೆದು, ನೆರವು ಕೋರಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ. ಅದಕ್ಕೆ ಸುಷ್ಮಾ ಸ್ವರಾಜ್‌ ಟ್ವೀಟ್‌ ಮಾಡಿ, ‘‘ಬಾಡಿಗೆ ತಾಯಿ ಮೂಲಕ ಪಡೆದ ಮಗುವನ್ನು ಪೋಷಕರು ಈಗ ಅನಾಥಾಶ್ರಮಕ್ಕೆ ಸೇರಬೇಕೆ. ಬಾಡಿಗೆ ತಾಯ್ತನದಿಂದ ಪಡೆದ ಮಗುವಿಗೆ ಬ್ರಿಟನ್‌ ಸರ್ಕಾರ ಪಾಸ್‌ಪೋರ್ಟ್‌ ನೀಡುತ್ತದೆಯೇ. ವಾಣಿಜ್ಯಿಕ ಬಾಡಿಗೆ ತಾಯ್ತನದ ವಕೀಲರು ದಯವಿಟ್ಟು ಇದಕ್ಕೆ ಸೂಕ್ತ ಸಲಹೆ ನೀಡಬೇಕು,’’ ಎಂದು ಸರಣಿ ಟ್ವೀಟ್‌ ಮಾಡಿದ್ದಾರೆ. ‘‘ಸಚಿವೆ ಸುಷ್ಮಾ ಸ್ವರಾಜ್‌ ಸಹಾಯ ಮಾಡುವಂತಿದ್ದರೆ ಬ್ರಿಟನ್‌ ಪಾಸ್‌ಪೋರ್ಟ್‌ ನೀಡಿದಾಗ ನಿರ್ಗಮನ ವೀಸಾವನ್ನು ತ್ವರಿತಗೊಳಿಸಬಹುದು,’’ ಎಂದು ದಂಪತಿ ಪರ ವಕೀಲರು ಹೇಳಿದ್ದಾರೆ.

ವೈದ್ಯಕೀಯ ವೀಸಾ ಪಡæದು ಮುಂಬೈನಲ್ಲಿ ವಾಸವಿದ್ದ ಚೆರಿಶ್‌ ಹಾಗೂ ಮೈಕೆಲ್‌ ಬಾಡಿಗೆ ತಾಯತ್ನದ ಮೂಲಕ ಮಗು ಪಡೆದಿದ್ದರು. ಅದರ ಹೆಸರು ಲಿಲಿ. ದಂಪತಿಯ ವೀಸಾ ಆ.7ರಂದು ಕೊನೆ ದಿನವಾಗಿತ್ತು. ಲಿಲಿ ಬ್ರಿಟನ್‌ ಪ್ರಜೆ ಎಂಬುದು ಖಚಿತಕೊಂಡು ಹಾಗೂ ಅಗತ್ಯ ಪರೀಕ್ಷೆಗಳನ್ನು ನಡೆಸಿದ ನಂತರ ಅದಕ್ಕೆ ಪಾಸ್‌ಪೋರ್ಟನ್ನು ನೀಡಲಾಗುವುದು ಎಂದು ಬ್ರಿಟನ್‌ ಗೃಹ ಕಚೇರಿ ತಿಳಿಸಿದೆ.