ಭೋಪಾಲ್‌[ಮೇ.30]: ದಾಂಪತ್ಯ ಜೀವನ ಸುಖಕರವಾಗಿರಲೆಂದು ಆಶಿಸಿ ಪೂಜಾ ಕೈಂಕರ್ಯ ನೆರವೇರಿಸಿದ್ದ ಕಿಲಾಡಿ ಪೂಜಾರಿಯೊಬ್ಬ ಅದೇ ನವವಧುವನ್ನು ಹಾರಿಸಿಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ. ಇಲ್ಲಿನ ವಿಧಿಶಾ ಜಿಲ್ಲೆಯ ಸಿರೋಜ್‌ ನಗರದ ಬಳಿಯಿರುವ ಅಸತ್‌ ಗ್ರಾಮದಲ್ಲಿ ಮೇ 7ರಂದು ಪ್ರಿಯಾ(21) ಎಂಬಾಕೆಯ ವಿವಾಹ ನಡೆದಿತ್ತು. ಆ ವಿವಾಹಕ್ಕೆ ಅದೇ ಗ್ರಾಮದ ವಿನೋದ್‌ ಎಂಬಾತ ಪೂಜಾರಿಯಾಗಿದ್ದ. ಆದರೆ ವಿವಾಹವಾದ ಕೆಲ ದಿನಗಳಲ್ಲೇ ಪ್ರಿಯಾ ತನ್ನ ತವರು ಮನೆಗೆ ತೆರಳಿದ್ದಳು.

ಈ ನಡುವೆ ಮದುವೆಯಾದ 16 ದಿನಗಳ ನಂತರ ಈ ಪ್ರಿಯಾ, ತಮಗೆ ಮದುವೆ ಮಾಡಿದ್ದ ವಿನೋದ್‌ ಜೊತೆ ಪರಾರಿಯಾಗಿದ್ದಾಳೆ. ಜೊತೆಗೆ ಅತ್ತೆ-ಮಾವನ ಮನೆಯವರು ಹಾಕಿದ್ದ 1.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 30 ಸಾವಿರ ರು. ನಗದನ್ನೂ ಎತ್ತುಕೊಂಡು ಹೋಗಿದ್ದಾಳೆ.

ವಿಚಿತ್ರವೆಂದರೆ ವಿನೋದ್‌ ಮತ್ತು ಪ್ರಿಯಾಗೆ ಎರಡು ವರ್ಷಗಳಿಂದ ಸಂಬಂಧವಿತ್ತಂತೆ. ಇದು ವಿನೋದ್‌ನ ಪತ್ನಿಗೂ ಗೊತ್ತಿತಂತೆ. ಹೀಗಾಗಿಯೇ ಇದೀಗ ವಿನೋದ್‌ ಮತ್ತು ಪ್ರಿಯಾ ಜೊತೆ ವಿನೋದ್‌ನ ಪತ್ನಿ ಕೂಡಾ ಪರಾರಿಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಇದೀಗ ವರನ ಕುಟುಂಬದವರು, ಪ್ರಿಯಾ, ವಿನೋದ್‌ ಮತ್ತು ಆತನ ಪತ್ನಿ ವಿರುದ್ಧ ಕೇಸು ದಾಖಲಿಸಿದ್ದಾರೆ.