ಸಾವೋಪಾಲೋ(ಅ.25): ಬ್ರೆಜಿಲ್ ಪ್ರವಾಸ ಕೈಗೊಳ್ಳುವ ಭಾರತೀಯರಿಗೆ ಅಲ್ಲಿನ ಅಧ್ಯಕ್ಷ ಜೈರ್ ಬೊಲ್ಸೊನ್ಯಾರೋ ತುಂಬ ವಿಶೇಷವಾದ ಗಿಫ್ಟ್ ನೀಡಿದ್ದಾರೆ. ಇನ್ನು ಮುಂದೆ ಬ್ರೆಜಿಲ್‌ಗೆ ತೆರಳುವ ಭಾರತೀಯರಿಗೆ ವೀಸಾದ ಅವಶ್ಯಕತೆಯಿಲ್ಲ ಎಂದು ಬೊಲ್ಸೊನ್ಯಾರೋ ಘೋಷಿಸಿದ್ದಾರೆ.

ಬ್ರೆಜಿಲ್‌ಗೆ ಭೇಟಿ ನಿಡುವ ಭಾರತ ಹಾಗೂ ಚೀನಿ ಪ್ರವಾಸಿಗರಿಗೆ ವೀಸಾ ಅಗತ್ಯವನ್ನು ತಮ್ಮ ಸರ್ಕಾರ ಕೈ ಬಿಟ್ಟಿದೆ ಎಂದು ಅಧ್ಯಕ್ಷ ಜೈರ್ ಬೊಲ್ಸೊನ್ಯಾರೋ ಸ್ಪಷ್ಟಪಡಿಸಿದ್ದಾರೆ.

ಭಾರತದ ಜೊತೆಗಿನ ಬ್ರೆಜಿಲ್‌ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಅವಶ್ಯಕತೆಯಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯರಿಗೆ ವೀಸಾ ರಹಿತ ಪ್ರವಾಸಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಬಲ್ಸೊನ್ಯಾರೋ ತಿಳಿಸಿದ್ದಾರೆ.

ಅಭಿವೃದ್ದಿ ಹೊಂದಿದ ದೇಶಗಳಿಗೆ ವೀಸಾ ಅಗತ್ಯತೆಯ ನಿಯಮಗಳಲ್ಲಿ ಸಡಲಿಕೆ ಮಾಡುವ ಹೊಸ ನೀತಿಯನ್ನು ಬ್ರೆಜಿಲ್ ಅಳವಡಿಸಿಕೊಂಡಿದ್ದು, ಈ ಹಿಂದೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ಪ್ರವಾಸಿಗರಿಗೆ ವೀಸಾ ಅಗತ್ಯವನ್ನು ರದ್ದುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.