ಬಾಲಕನ ಉಸಿರಾಟ ಮತ್ತು ನಾಡಿ ಮಿಡಿತ ನಿಂತಿರುವುದನ್ನು ಗಮನಿಸಿದ ಪಾಲಕರು ಆತ ಮೃತಪಟ್ಟಿದ್ದಾನೆಂದು ಭಾವಿಸಿದ್ದರು. ಇನ್ನು ಆತನ ಅಂತ್ಯ ಸಂಸ್ಕಾರಕ್ಕೆ ಮನಗುಂಡಿ ಗ್ರಾಮದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಹುಬ್ಬಳ್ಳಿ (ಫೆ.19): ಮೃತಪಟ್ಟಿದ್ದಾನೆಂದು ವೈದ್ಯರೇ ಕೈಚೆಲ್ಲಿದ್ದ ಬಾಲಕ, ಶವಸಂಸ್ಕಾರಕ್ಕೆ ಹೊತ್ತೊಯ್ಯುವಾಗ ಉಸಿರಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಹುಬ್ಬಳ್ಳಿಯ ಮನೆಯೊಂದರಲ್ಲಿ ಗಾರೆ ಕೆಲಸ ಮಾಡುವಾಗ 16 ವರ್ಷದ ಕುಮಾರ್ ಮರಡಿಗೆ ಬೀದಿ ನಾಯಿ ಕಚ್ಚಿತ್ತು. ಸೂಕ್ತ ಚಿಕಿತ್ಸೆ ಲಭಿಸದ ಕಾರಣ ಬಾಲಕ ಮೂರ್ಛೆ ಹೋಗಿದ್ದ.
ಆ ನಂತರ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಬಾಲಕನ ದೇಹ ಯಾವ ಚಿಕಿತ್ಸೆಗೂ ಸ್ಪಂದಿಸಿರಲಿಲ್ಲ. ಹೀಗಾಗಿ ವೈದ್ಯರು ಕುಮಾರನನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು.
ಬಾಲಕನ ಉಸಿರಾಟ ಮತ್ತು ನಾಡಿ ಮಿಡಿತ ನಿಂತಿರುವುದನ್ನು ಗಮನಿಸಿದ ಪಾಲಕರು ಆತ ಮೃತಪಟ್ಟಿದ್ದಾನೆಂದು ಭಾವಿಸಿದ್ದರು. ಇನ್ನು ಆತನ ಅಂತ್ಯ ಸಂಸ್ಕಾರಕ್ಕೆ ಮನಗುಂಡಿ ಗ್ರಾಮದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಎಲ್ಲಾ ಸಿದ್ಧತೆಗಳಾಗಿ ದೇಹವನ್ನು ಸ್ಮಶಾನಕ್ಕೆ ಸಾಗಿಸುವಾಗ ಕುಮಾರ್ ಮತ್ತೆ ಉಸಿರಾಟ ಆರಂಭಿಸಿದ್ದಾನೆ. ಇದನ್ನು ಗಮನಿಸಿದ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಕುಮಾರ್ ನನ್ನು ಹುಬ್ಬಳ್ಳಿಯ ಸುಚಿರಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಆಸ್ಪತ್ರೆಯ ವೈದ್ಯರು ಬಾಲಕನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.