ಮುಂಬೈ: ಸಾರ್ವಜನಿಕ ಸ್ಥಳಗಳು ಮತ್ತು ಬಹಿರಂಗವಾಗಿ ವ್ಯಕ್ತಿಯೋರ್ವನಿಗೆ ಜಾತಿ ಹೆಸರಿನಲ್ಲಿ ನಿಂದಿಸಿದರೆ ಮಾತ್ರವೇ ಅದು ದೌರ್ಜನ್ಯ ತಡೆ ಕಾಯ್ದೆಯಡಿ ಜಾತಿನಿಂದನೆಯಾಗಲಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ಜಾತಿನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಸತಾರಾ ಮೂಲದ ಸರ್ಕಾರಿ ನೌಕರ ಸುನೀಲ್ ಮದಾನೆ ಅವರನ್ನು ಬಂಧಿಸದಂತೆ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

ದೂರಿನ ಪ್ರಕಾರ, ಮೇಲ್ನೋಟಕ್ಕೆ ಮಹಿಳೆ ಮೇಲಿನ ನಿಂದನೆಯು ಸಾರ್ವಜನಿಕ ಪ್ರದೇಶದಲ್ಲಿ ನಡೆದಿಲ್ಲ ಎಂಬುದು ರುಜುವಾತಾಗಿದೆ. ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗೆ ನಿಂದಿಸಿ, ಆತನ ತೇಜೋವಧೆ ಮಾಡುವ ಉದ್ದೇಶ ಹೊಂದಿದ್ದಲ್ಲಿ ಮಾತ್ರವೇ ಅದೊಂದು ಅಪರಾಧವಾಗಲಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯೇ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಆರೋಪಿ ಸುನೀಲ್‌ಗೆ ಮಧ್ಯಂತರ ಜಾಮೀನು ನೀಡಲಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿತು.