ಕರ್ನಾಟಕದ ಹೈಕೋರ್ಟ್‌ನಲ್ಲಿ ನ್ಯಾಯಾಧೀಶ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳೆಯೂ ಹೌದು. ಜತೆಗೆ ಕಲ್ಕತ್ತಾ ಹೈಕೋರ್ಟ್‌ನ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಿದ್ದರು
ನವದೆಹಲಿ(ಡಿ.04): ಭಾರತೀಯ ನ್ಯಾಯಾಂಗ ಕ್ಷೇತ್ರದಲ್ಲಿ ಹಲವು ಪ್ರಥಮಗಳ ದಾಖಲೆ ಬರೆದ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಕನ್ನಡತಿ ಮಂಜುಳಾ ಚೆಲ್ಲೂರ್ ಅವರು ಸೋಮವಾರ ಸೇವೆಯಿಂದ ನಿವೃತ್ತರಾದರು.
ಮೂಲತಃ ಬಳ್ಳಾರಿಯವರಾದ ನ್ಯಾ. ಮಂಜುಳಾ ಅವರು ಬಳ್ಳಾರಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದ ಮೊದಲ ಮಹಿಳೆ. ಕರ್ನಾಟಕದ ಹೈಕೋರ್ಟ್ನಲ್ಲಿ ನ್ಯಾಯಾಧೀಶ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳೆಯೂ ಹೌದು. ಜತೆಗೆ ಕಲ್ಕತ್ತಾ ಹೈಕೋರ್ಟ್ನ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಿದ್ದರು. ಈ ನಡುವೆ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿರುವ ಅವರು 2016ರ ಆಗಸ್ಟ್ನಲ್ಲಿ ಬಾಂಬೆ ಹೈಕೋರ್ಟ್ನ ಎರಡನೇ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
1955ರ ಡಿ.5ರಂದು ಜನಿಸಿದ ನ್ಯಾ. ಮಂಜುಳಾ ಅವರು ಬಾಂಬೆ ಹೈಕೋರ್ಟ್ನಲ್ಲಿ 16 ತಿಂಗಳು ಸೇವೆ ಸಲ್ಲಿಸಿದ್ದು, ಹಲವು ಮಹತ್ವದ ಪ್ರಕರಣಗಳನ್ನು ವಿಚಾರಣೆ ನಡೆಸಿದ್ದಾರೆ. ಜನಪರ ತೀರ್ಪುಗಳನ್ನು ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ಮಹಿಳಾ ಪೀಠವನ್ನೇ ರಚಿಸಿದ್ದಾರೆ. ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನ್ಯಾಯಾಲಯದ ಎರಡು ತಿಂಗಳ ಬೇಸಿಗೆ ರಜೆ ಪೈಕಿ ಈ ವರ್ಷ ಒಂದು ತಿಂಗಳು ಕೋರ್ಟ್ ಕಲಾಪಗಳು ನಡೆಯುವಂತೆ ನೋಡಿಕೊಂಡಿದ್ದಾರೆ.
