ಉಡುಪಿ, [ಮಾ.01]:  ಪಾಕಿಸ್ತಾನ್ ಜಿಂದಾಬಾದ್ ಎನ್ನುತ್ತಾ ಮಲ್ಪೆ ಬೀಚಿಗೆ ಬಾಂಬ್ ಹಾಕುತ್ತೇನೆ ಎಂದು ಕಿಡಿಗೇಡಿಯೊಬ್ಬ ಹೇಳುವ ವಿಡಿಯೋವೊಂದು ಉಡುಪಿ ಜಿಲ್ಲೆಯಾದ್ಯಂತ ವೈರಲ್ ಆಗಿದೆ. 

ಆದ್ರೆ ಈತ ಯಾರು ಎನ್ನುವುದು ತಿಳಿದಿಲ್ಲ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹಿಂದಿಯಲ್ಲಿ ಮಾತನಾಡುವ ಈತ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದ್ದಾನೆ. ಅಲ್ಲದೇ ನಮ್ಮ ಮುಂದಿನ ಟಾರ್ಗೆಟ್ ಮಲ್ಪೆ ಬೀಚ್ ಆಗಿದೆ ಎಂದು ಮಲ್ಪೆಯ ಜನರ ಬಗ್ಗೆ ಅಸಹ್ಯ ಶಬ್ಧ ಗಳಿಂದ ಮಾತನಾಡುತ್ತಾನೆ ಮತ್ತು ಮಲ್ಪೆಗೆ ಬಾಂಬ್ ಹಾಕಿ ಇಲ್ಲಿನ ಸಾಲು ಸಾಲು ಅಂಗಡಿಗಳನ್ನು ನಾಶ ಮಾಡುತ್ತೇನೆ ಎಂದು ನಾಲಿಗೆ ಹರಿಬಿಟ್ಟಿದ್ದಾನೆ.

ಚಾಮರಾಜನಗರ ಯುವಕನ ಸ್ಟೇಟಸ್ ಹುಚ್ಚಾಟ,ಇಂತವರ ಮೇಲೂ ಮಾಡ್ಬೇಕು ಸರ್ಜಿಕಲ್ ದಾಳಿ

ತೆಂಗಿನ ತೋಟದಲ್ಲಿ ಸೆಲ್ಫಿ ಸ್ಟಿಕ್ ಬಳಸಿ ತಾನೇ ಈ ವಿಡಿಯೋ ಶೂಟಿಂಗ್ ಮಾಡಿದ್ದು, ಸುತ್ತಲಿನ ಪ್ರದೇಶವನ್ನು ಗಮನಿಸಿದಾಗ ಮಲ್ಪೆಯ ಸ್ಥಳೀಯ ಪ್ರದೇಶದಲ್ಲಿಯೇ ಇದನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ.

 1.24 ನಿಮಿಷದ ಈ ವಿಡಿಯೋದಲ್ಲಿ ಆತ ಮಾತನಾಡುತ್ತಾ ನಡುವೆ ನಗುವ ರೀತಿಯನ್ನು ನೋಡಿದರೇ ಇದು ಯಾರೋ ಮತಿಗೇಡಿಗಳು ತಮಾಷೆಗಾಗಿ ಮಾಡಿದ ವಿಡಿಯೋ ಅನ್ನಿಸುತ್ತದೆ. 

ಈ ವಿಡಿಯೋದ ಬಗ್ಗೆ ಇನ್ನೂ ಯಾರೂ ಪೊಲೀಸರಿಗೆ ಅಧಿಕೃತ ದೂರು ನೀಡಿಲ್ಲ, ಆದ್ರೆ, ಮಾಹಿತಿ ಪಡೆದಿರುವ ಪೊಲೀಸರು ಈ ಕಿಡಿಗೇಡಿ ಯುವಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇಡೀ ದೇಶದವೇ ದೇಶ ಭಕ್ತಿಯಲ್ಲಿ ಮುಳುಗಿರುವಾಗ ಈತ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿರುವುದು, ಸಾಮಾಜಿತ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.