ಬಿಎಂಟಿಸಿ ಮಾರ್ಗ ತಪಾಸಣಾ ಅಧಿಕಾರಿಗಳು ಹಾಗೂ ನಿರ್ವಾಹಕರ ನಡುವೆ ಆಗಾಗ ನಡೆಯುವ ಜಟಾಪಟಿಗೆ ಅಂತ್ಯ ಹಾಡಲು ಬಿಎಂಟಿಸಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಮಾರ್ಗ ತಪಾಸಣಾ ಅಧಿಕಾರಿಗಳಿಗೆ ಬಾಡಿ ವೋರ್ನ್ ಕ್ಯಾಮೆರಾ ನೀಡಲು ತೀರ್ಮಾನಿಸಿದೆ.

ಬೆಂಗಳೂರು: ಬಿಎಂಟಿಸಿ ಮಾರ್ಗ ತಪಾಸಣಾ ಅಧಿಕಾರಿಗಳು ಹಾಗೂ ನಿರ್ವಾಹಕರ ನಡುವೆ ಆಗಾಗ ನಡೆಯುವ ಜಟಾಪಟಿಗೆ ಅಂತ್ಯ ಹಾಡಲು ಬಿಎಂಟಿಸಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಮಾರ್ಗ ತಪಾಸಣಾ ಅಧಿಕಾರಿಗಳಿಗೆ ಬಾಡಿ ವೋರ್ನ್ ಕ್ಯಾಮೆರಾ ನೀಡಲು ತೀರ್ಮಾನಿಸಿದೆ.

ಶಾಂತಿ ನಗರ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ನಿಗಮದ ಪ್ರಗತಿ ಪರಿಶೀಲನೆ ನಡೆಸಿದರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್ ಮಾತನಾಡಿ, ಮಾರ್ಗ ತಪಾಸಣೆ ವೇಳೆ ಅಧಿಕಾರಿಗಳು ಮತ್ತು ನಿರ್ವಾಹಕರ ನಡುವೆ ವಾಗ್ವಾದಗಳು, ಜಗಳಗಳು ನಡೆಯುತ್ತಿವೆ.

ಅಲ್ಲದೆ, ಅಧಿಕಾರಿಗಳ ವಿರುದ್ಧ ಕಿರುಕುಳದ ಆರೋಪಿಗಳು ಕೇಳಿ ಬರುತ್ತಿದ್ದು, ನಿರ್ವಾಹಕರು ಆತ್ಮಹತ್ಯೆಗೂ ಮುಂದಾಗುತ್ತಿದ್ದಾರೆ.

ಇದನ್ನು ಕೊನೆಗಾಣಿಸುವ ಉದ್ದೇಶದಿಂದ ತಪಾಸಣಾ ಅಧಿಕಾರಿಗಳಿಗೆ ಬಾಡಿ ವಾರ್ನ್ ಕ್ಯಾಮರಾ ನೀಡಲು ನಿರ್ಧರಿಸಲಾಗಿದೆ. ಇದರಿಂದ ಅಧಿಕಾರಿಗಳು ತಪಾಸಣೆಯ ಘಟನೆಯನ್ನು ಚಿತ್ರೀಕರಿಸಬಹುದು. ಸಾಕ್ಷ್ಯಾ ಸಮೇತ ಸಿಕ್ಕಿ ಬಿದ್ದಾಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಇದು ನೆರವಾಗಲಿದೆ.

ಈ ಹಿನ್ನೆಲೆಯಲ್ಲಿ ಸುಮಾರು 80 ಬಾಡಿ ವೋರ್ನ್ ಕ್ಯಾಮರಾ ಖರೀದಿಸಲು ನಿರ್ಧರಿಸಲಾಗಿದೆ ಎಂದರು. ಸಂಚಾರ ಪೊಲೀಸರು ಈಗಾಗಲೇ ನಗರದ ಹಲವು ಕಡೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಈ ಕ್ಯಾಮೆರಾಗಳನ್ನು ಬಳಸುತ್ತಿದ್ದಾರೆ.