ಟಿಕೆಟ್ ದರ ಇಳಿಕೆ : ಬಿಎಂಟಿಸಿ ವೋಲ್ವೊಗೆ ಬಂಪರ್

First Published 16, Jan 2018, 10:21 AM IST
BMTC Volvo Price Down
Highlights

‘ಬಿಳಿ ಆನೆ’ ಎಂದೇ ಕರೆಯಿಸಿಕೊಳ್ಳುತ್ತಿದ್ದ ಬಿಎಂಟಿಸಿ ವೋಲ್ವೋ ಬಸ್ (ವಜ್ರ, ವಾಯು ವಜ್ರ) ಇದೀಗ ನಿಗಮಕ್ಕೆ ಆದಾಯ ತರುವ ಬಂಗಾರದ ಆನೆಯಾಗಿ ಬದಲಾಗಿದೆ. ಜನವರಿ 1ರಿಂದ ವೋಲ್ವೋ ಬಸ್ ಟಿಕೆಟ್ ದರ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಕಳೆದ ಎಂಟು ದಿನಗಳಲ್ಲಿ ನಿರೀಕ್ಷೆಗೂ ಮೀರಿ ಸುಮಾರು 25 ಲಕ್ಷ ರು. ಹೆಚ್ಚುವರಿ ಆದಾಯ ಬಂದಿದೆ. ಟಿಕೆಟ್ ದರ ಇಳಿಕೆಯಿಂದ ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಆದಾಯದಲ್ಲೂ ಹೆಚ್ಚಳವಾಗಿದೆ.

ಬೆಂಗಳೂರು (ಜ.16): ‘ಬಿಳಿ ಆನೆ’ ಎಂದೇ ಕರೆಯಿಸಿಕೊಳ್ಳುತ್ತಿದ್ದ ಬಿಎಂಟಿಸಿ ವೋಲ್ವೋ ಬಸ್ (ವಜ್ರ, ವಾಯು ವಜ್ರ) ಇದೀಗ ನಿಗಮಕ್ಕೆ ಆದಾಯ ತರುವ ಬಂಗಾರದ ಆನೆಯಾಗಿ ಬದಲಾಗಿದೆ. ಜನವರಿ 1ರಿಂದ ವೋಲ್ವೋ ಬಸ್ ಟಿಕೆಟ್ ದರ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಕಳೆದ ಎಂಟು ದಿನಗಳಲ್ಲಿ ನಿರೀಕ್ಷೆಗೂ ಮೀರಿ ಸುಮಾರು 25 ಲಕ್ಷ ರು. ಹೆಚ್ಚುವರಿ ಆದಾಯ ಬಂದಿದೆ. ಟಿಕೆಟ್ ದರ ಇಳಿಕೆಯಿಂದ ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಆದಾಯದಲ್ಲೂ ಹೆಚ್ಚಳವಾಗಿದೆ.

 ವಜ್ರ ಬಸ್‌ಗಳಲ್ಲಿ ಸ್ಟೇಜ್ ಆಧಾರದ ಮೇಲೆ ಶೇ.37ರವರೆಗೂ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್) ಸಂಚರಿಸುವ ವಾಯುವಜ್ರ ಬಸ್‌ಗಳಲ್ಲಿ ಕನಿಷ್ಠ 15ರು.ಯಿಂದ ಗರಿಷ್ಠ 45 ರು. ವರೆಗೂ ಟಿಕೆಟ್ ದರ ಇಳಿಕೆಯಾಗಿದೆ.

ಪ್ರಯಾಣಿಕರ ಸಂಖ್ಯೆ ಏರಿಕೆ: ಬಿಎಂಟಿಸಿ ನಗರದಲ್ಲಿ ನಿತ್ಯ 680 ವೋಲ್ವೋ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಈ ಪೈಕಿ 110 ಬಸ್‌ಗಳು ನಗರ ನಾನಾ ಭಾಗಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುತ್ತಿವೆ. ಟಿಕೆಟ್ ದರ ಕಡಿತಕ್ಕೂ ಮುನ್ನ ವೋಲ್ವೋ ಬಸ್‌ಗಳಲ್ಲಿ ನಿತ್ಯ ಸುಮಾರು 58 ಸಾವಿರ ಮಂದಿ ಪ್ರಯಾಣಿಕರು ಸಂಚರಿಸುತ್ತಿದ್ದರು.

ದರ ಇಳಿಕೆ ಬಳಿಕ ಈ ಸಂಖ್ಯೆ 84 ಸಾವಿರಕ್ಕೆ ಏರಿಕೆಯಾಗಿದೆ. ಈ ಮೂಲಕ 25 ಸಾವಿರ ಮಂದಿ ಸಾರ್ವಜನಿಕರು ಹೊಸದಾಗಿ ವೋಲ್ವೋ ಬಸ್ ಪ್ರಯಾಣಿಕರಾಗಿ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ವೋಲ್ವೋ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ವೃದ್ಧಿಯಾಗುವ ನಿರೀಕ್ಷೆಯಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಆದಾಯ ಹೆಚ್ಚಳ: ಟಿಕೆಟ್ ದರ ಇಳಿಕೆಗೂ ಹಿಂದಿನ ಎಂಟು ದಿನ 3.80 ಕೋಟಿ ಆದಾಯ ಬಂದಿತ್ತು. ಜನವರಿ 1ರಿಂದ 8ರ ವರೆಗೆ ಸುಮಾರು 4 ಕೋಟಿ ರು. ಮಿಕ್ಕು ಆದಾಯ ಬಂದಿದೆ. ಈ ಮೂಲಕ ಆದಾಯದಲ್ಲಿ ಸುಮಾರು 25 ಲಕ್ಷ ಏರಿಕೆಯಾಗಿದೆ.

ಎಲೆಕ್ಟ್ರಾನಿಕ್‌ಸಿಟಿ, ಬನ್ನೇರುಘಟ್ಟ, ಐಟಿಪಿಎಲ್, ಕೆಐಎಎಲ್ ಮಾರ್ಗದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಉಳಿದ ಮಾರ್ಗಗಳಲ್ಲೂ ಪ್ರಯಾಣಿಕರ ಸಂಖ್ಯೆ ಕೊಂಚ ಮಟ್ಟಿಗೆ ಹೆಚ್ಚಳವಾಗಿದೆ. ಈ ದರ ಇಳಿಕೆ ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಜಾರಿಯಲ್ಲಿರುತ್ತದೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ವಿಸ್ತರಿಸುವುದಾಗಿ ನಿಗಮ ಆರಂಭದಲ್ಲಿ ಹೇಳಿತ್ತು. ಇದೀಗ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದಿದ್ದು, ವಿಸ್ತರಣೆಯಾಗುವ ಸಾಧ್ಯತೆ ಇದೆ.

loader