ಬೆಂಗಳೂರು :  ಸತತವಾಗಿ ನಷ್ಟದಲ್ಲಿ ನಡೆಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಹವಾನಿಯಂತ್ರಿತ ವೋಲ್ವೋ ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ವಹಿಸಲು ಸಾರಿಗೆ ಸಚಿವರು ಗಂಭೀರವಾಗಿ ಚಿಂತನೆ ನಡೆಸುತ್ತಿದ್ದಾರೆ.

ಬಿಳಿಯಾನೆಯಾಗಿರುವ ಈ ಬಸ್‌ಗಳ ಕಾರ್ಯಾಚರಣೆಯಿಂದ ನಿಗಮಕ್ಕೆ ಭಾರಿ ನಷ್ಟವಾಗುತ್ತಿದೆ, ವೋಲ್ವೋ ಬಸ್‌ಗಳಿಗೆ ಪ್ರಯಾಣಿಕರನ್ನು ಸೆಳೆಯಲು ನಿಗಮ ಸಾಕಷ್ಟುಕಸರತ್ತು ಮಾಡುತ್ತಿದ್ದರೂ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಈ ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ವಹಿಸುವ ಮೂಲಕ ನಿಗಮದ ಮೇಲಿನ ಭಾರವನ್ನು ಕಡಿಮೆ ಮಾಡಿಕೊಳ್ಳಲು ಸಚಿವರು ಯೋಚಿಸುತ್ತಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಬಿಎಂಟಿಸಿಯು ನಗರದಲ್ಲಿ ಕಾರ್ಯಾಚರಣೆ ಮಾಡುತ್ತಿರುವ 825 ವೋಲ್ವೋ ಬಸ್‌ಗಳ ನಿರ್ವಹಣೆ ಕಷ್ಟವಾಗಿದೆ. ಅಲ್ಲದೆ, ಈ ಬಸ್‌ಗಳ ಕಾರ್ಯಾಚರಣೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ 600 ವೋಲ್ವೋ ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಿ ಬೆಂಗಳೂರಿನಿಂದ ಮೈಸೂರು, ತುಮಕೂರು, ಕೋಲಾರ ಭಾಗಗಳಲ್ಲಿ ಕಾರ್ಯಾಚರಣೆ ಮಾಡಲು ಚಿಂತಿಸಲಾಗಿದೆ. ಹಾಗೆಂದು ಏಕಾಏಕಿ ವೋಲ್ವೋ ಬಸ್‌ಗಳನ್ನು ರಾಜಧಾನಿಯಿಂದ ಹೊರ ಹಾಕುವುದಿಲ್ಲ. ಈ ಸಂಬಂಧ ಬಿಎಂಟಿಸಿ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿ ಅಭಿಪ್ರಾಯ ಪಡೆದ ಬಳಿಕ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

ಬಿಎಂಟಿಸಿಗೆ ಈ ವೋಲ್ವೋ ಬಸ್‌ ಕಾರ್ಯಾಚರಣೆಯಿಂದ ಪ್ರತಿ ವರ್ಷ ನಷ್ಟಉಂಟಾಗುತ್ತಿದೆ. ಪ್ರತಿ ಕಿಲೋ ಮೀಟರ್‌ ಕಾರ್ಯಾಚರಣೆಯಿಂದ ಸುಮಾರು 70 ರು. ಆದಾಯ ಬರುತ್ತಿದೆ. ಆದರೆ, ಕಾರ್ಯಾಚರಣೆ ವೆಚ್ಚವೇ 85 ರು. ಆಗುತ್ತಿದೆ. ಇದರಿಂದ ನಿಗಮಕ್ಕೆ ಸತತ ನಷ್ಟವಾಗುತ್ತಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಸ್ತುತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ನಗರದ ಕೆಲ ಆಯ್ದ ಮಾರ್ಗಗಳಲ್ಲಿ ವೋಲ್ವೋ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ವಿಮಾನ ನಿಲ್ದಾಣ ಹಾಗೂ ಐಟಿ-ಬಿಟಿ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ಈ ಬಸ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಆದಾಯಕ್ಕಿಂತ ಕಾರ್ಯಾಚರಣೆ ವೆಚ್ಚವೇ ಅಧಿಕವಾಗಿದೆ. ಆದರೂ ಪ್ರಯಾಣಿಕರಿಗೆ ತೊಂದರೆಯಾಗದಂತೆ ವೋಲ್ವೋ ಬಸ್‌ ಸೇವೆ ಮುಂದುವರಿಸಲಾಗಿದೆ ಎಂದು ಹೇಳಿದರು.

ಕೆಎಸ್ಸಾರ್ಟಿಸಿ ಒಪ್ಪೋದು ಕಷ್ಟ?

ಈಗಾಗಲೇ ಬಿಎಂಟಿಸಿ ಈ ವೋಲ್ವೋ ಬಸ್‌ಗಳಿಂದ ನಿರಂತರ ನಷ್ಟಅನುಭವಿಸುತ್ತಿದೆ. ಈ ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ನೀಡಿದರೂ ಲಾಭ ಮಾಡುವುದು ಕಷ್ಟ. ಏಕೆಂದರೆ, ಈ ಬಸ್‌ಗಳ ನಿರ್ವಹಣಾ ವೆಚ್ಚ ಅಧಿಕವಾಗಿರುತ್ತದೆ. ಅಲ್ಲದೆ, ಮೈಲೇಜ್‌ ಕೂಡ ಕಡಿಮೆಯಿದೆ. ಹಾಗಾಗಿ ನಾವು ಕಾರ್ಯಾಚರಣೆ ಮಾಡಿದರೂ ನಷ್ಟಅನುಭವಿಸುವುದು ಖಚಿತ. ಮೊದಲೇ ನಿಗಮ ನಷ್ಟದಲ್ಲಿ ಮುನ್ನಡೆಯುತ್ತಿದೆ. ಇನ್ನು ಈ ಬಸ್‌ಗಳನ್ನು ಕಾರ್ಯಾಚರಣೆಗೆ ಮುಂದಾದರೆ ನಷ್ಟದ ಪ್ರಮಾಣ ಹೆಚ್ಚಳವಾಗುತ್ತದೆ. ಹಾಗಾಗಿ ಆಡಳಿತ ಮಂಡಳಿ ವೋಲ್ವೋ ಬಸ್‌ಗಳನ್ನು ಪಡೆಯಲು ಒಪ್ಪುವುದು ಅನುಮಾನ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.