ಕೆಲ ತಿಂಗಳಿಂದ ಸತತ ಡೀಸೆಲ್‌ ದರ ಏರಿಕೆಯಾದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ದರದ ಏರಿಕೆಯ ಬಗ್ಗೆ ಇದೀಗ ಮತ್ತೊಮ್ಮೆ ಮರುಜೀವ ಬಂದಿದ್ದು ಶೇ. 18ರ ಬದಲಾಗಿ ಶೇ.15ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. 

ಬೆಂಗಳೂರು : ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ತೆರಿಗೆ ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳು ಸಲ್ಲಿಸಿರುವ ಟಿಕೆಟ್‌ ದರ ಏರಿಕೆ ಪ್ರಸ್ತಾವನೆಯನ್ನು ಮರುಪರಿಶೀಲಿಸಲು ಸಾರಿಗೆ ಇಲಾಖೆ ನಿರ್ಧರಿಸಿರುವುದರಿಂದ ಟಿಕೆಟ್‌ ದರ ಶೇ.15ರಿಂದ 16ರಷ್ಟುಇಳಿಕೆಯಾಗುವ ಸಾಧ್ಯತೆಯಿದೆ.

ಕೆಲ ತಿಂಗಳಿಂದ ಸತತ ಡೀಸೆಲ್‌ ದರ ಏರಿಕೆಯಾದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ನಿಗಮಗಳಿಗೆ ಮಾಸಿಕ 15 ಕೋಟಿ ರು.ಗೂ ಅಧಿಕ ಹೆಚ್ಚುವರಿ ಹೊರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ನಿಗಮಗಳು ಟಿಕೆಟ್‌ ದರ ಏರಿಕೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. 

ಸೆ.17ರಂದು ರಾಜ್ಯ ಸರ್ಕಾರ ಶೇ.18ರಷ್ಟುಟಿಕೆಟ್‌ ದರ ಏರಿಸಿ ಸುತ್ತೋಲೆ ಹೊರಡಿಸಿತ್ತು. ಒಂದೆಡೆ ಡೀಸೆಲ್‌ ದರ ಕಡಿಮೆಗೊಳಿಸಿ, ಅದರ ಬೆನ್ನಲ್ಲೇ ಟಿಕೆಟ್‌ ದರ ಏರಿಸಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾದ್ದರಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ದರ ಏರಿಕೆ ತಡೆ ಹಿಡಿಯಲಾಗಿತ್ತು.

ಇದೀಗ ಮುಖ್ಯಮಂತ್ರಿ ಸೂಚನೆ ಮೇರೆಗೆ ಸಾರಿಗೆ ಇಲಾಖೆಯು ಟಿಕೆಟ್‌ ದರ ಏರಿಕೆ ಪ್ರಸ್ತಾವನೆ ಮರುಪರಿಶೀಲಿಸಲು ಮುಂದಾಗಿದೆ. ಡೀಸೆಲ್‌ ದರ ಲೀಟರ್‌ಗೆ ಸುಮಾರು 2 ರು. ಇಳಿಕೆಯಾಗಿರುವುದರಿಂದ ನಿಗಮಗಳಿಗೆ ಮಾಸಿಕ ಉಂಟಾಗುತ್ತಿದ್ದ ಹೆಚ್ಚುವರಿ ಆರ್ಥಿಕ ಹೊರೆ ಕೊಂಚ ತಗ್ಗಿದೆ. ಹಾಗಾಗಿ ಶೇ.18ರ ಬದಲು 15ರಿಂದ 16 ರಷ್ಟುಟಿಕೆಟ್‌ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.