ಮಳೆಗಾಲದಲ್ಲಿ ಬಿಎಂಟಿಸಿ ಬಸ್‌ ಪ್ರಯಾಣ ಎಂಬುದು ಪ್ರಯಾಸಕರ ಎಂಬ ಭಾವನೆ ಹಾಗೂ ಸೋರುವ ಬಸ್‌ಗಳಲ್ಲಿ ತೊಯ್ದು ತೊಪ್ಪೆಯಾಗಿ ಪ್ರಯಾಣಿಸಿದ ನೆನಪು ನಿಮಗಿದ್ದರೆ, ಇನ್ನು ಮುಂದೆ ಇಂತಹ ಅನಿಸಿಕೆಯನ್ನು ಬಿಟ್ಟುಬಿಡಿ.

ಬೆಂಗಳೂರು(ಮೇ.26): ಮಳೆಗಾಲದಲ್ಲಿ ಬಿಎಂಟಿಸಿ ಬಸ್‌ ಪ್ರಯಾಣ ಎಂಬುದು ಪ್ರಯಾಸಕರ ಎಂಬ ಭಾವನೆ ಹಾಗೂ ಸೋರುವ ಬಸ್‌ಗಳಲ್ಲಿ ತೊಯ್ದು ತೊಪ್ಪೆಯಾಗಿ ಪ್ರಯಾಣಿಸಿದ ನೆನಪು ನಿಮಗಿದ್ದರೆ, ಇನ್ನು ಮುಂದೆ ಇಂತಹ ಅನಿಸಿಕೆಯನ್ನು ಬಿಟ್ಟುಬಿಡಿ.

ಏಕೆಂದರೆ, ಈ ಬಾರಿಯ ಮಳೆಗಾಲದಲ್ಲಿ ಬಸ್‌ಗಳಲ್ಲಿ ಮಳೆ ನೀರು ಸೋರಿಕೆ ತಡೆಗಟ್ಟಲು ಕೃತಕ ಮಳೆ ಪ್ರಯೋಗಕ್ಕೆ ಬಿಎಂಟಿಸಿ ಮುಂದಾಗಿದೆ. ನಗರದಲ್ಲಿ ಸಂಚರಿಸುವ ವಿವಿಧ ಮಾದರಿಯ 6400 ಬಸ್‌ಗಳಿಗೆ ಈಗಾಗಲೇ ಈ ಕೃತಕ ಮಳೆಯಲ್ಲಿ ತೋಯಿಸುವ ಮೂಲಕ ಪ್ರಯಾಣಿಕರು ಮಳೆಗಾಲದಲ್ಲೂ ಬೆಚ್ಚಗಿನ ಪ್ರಯಾಣ ಮಾಡುವಂತೆ ನೋಡಿಕೊಳ್ಳುವ ಕಾಳಜಿ ತೋರತೊಡಗಿದೆ.

ಹೌದು, ಬಿರು ಬೇಸಿಗೆ, ತುಕ್ಕು ಹಿಡಿಯುವುದು, ಅಪಘಾತ ಇತ್ಯಾದಿ ಕಾರಣಗಳಿಗಾಗಿ ಹದಗೆಟ್ಟಬಿಎಂಟಿಸಿ ಬಸ್‌ಗಳ ಮೇಲ್ಚಾವಣಿ, ಕಿಟಕಿ ದುರಸ್ತಿಗೆ ಮುಂದಾಗಿದೆ ಮತ್ತು ಬಿಎಂಟಿಸಿಯ ಬಸ್‌ಗಳಲ್ಲಿ ಒಂದೂ ರಂಧ್ರವಿರದಂತೆ ನೋಡಿಕೊಳ್ಳಲು ಕೃತಕ ಮಳೆ ಪ್ರಯೋಗದ ನೆರವು ಪಡೆದಿದೆ. ಬಿಎಂಟಿಸಿ ಯಲ್ಲಿ ವಿವಿಧ ಮಾದರಿಯ 6400ಕ್ಕೂ ಹೆಚ್ಚು ಬಸ್‌ಗಳಿವೆ. ಈ ಪೈಕಿ ಹೊಸ ಬಸ್‌ಗಳಿಗಿಂತ ಹಳೆಯ ಬಸ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಬೇಸಿಗೆ ಸಮಯದಲ್ಲಿ ಬಸ್‌ಗಳ ಛಾವಣಿಗಳು ಬಿರುಕು ಬಿಡುವುದು, ರಂಧ್ರ ಗಳಾಗುವ ಸಾಧ್ಯತೆ ಹೆಚ್ಚು. ಮಳೆಗಾಲದಲ್ಲಿ ಜೋರು ಮಳೆ ಬಂದಾಗ ಛಾವಣಿಯಲ್ಲಿ ಹರಿಯುವ ನೀರು ರಂಧ್ರ ಅಥವಾ ಬಿರುಕುಗಳ ಮುಖಾಂತರ ಬಸ್‌ ಒಳಗೆ ಸೋರಿಕೆಯಾಗುತ್ತದೆ. ಸಾಮಾನ್ಯವಾಗಿ ಈ ರಂಧ್ರಗಳು ಮೇಲು ನೋಟಕ್ಕೆ ಕಂಡು ಬರುವುದಿಲ್ಲ.

ಹೀಗಾಗಿ ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರೀಯ ಕಾರ್ಯಾಗಾರದಲ್ಲಿ ಬಸ್‌ಗಳನ್ನು ಕೃತಕ ಮಳೆಯಲ್ಲಿ ನೆನೆಯುವಂತೆ ಮಾಡಲಾಗುತ್ತಿದೆ. ಈ ವ್ಯವಸ್ಥೆಯಡಿ ಬಸ್‌ಗಳ ಮೇಲೆ ಕೃತಕ ಮಳೆ ಸುರಿಸಿ ಅದರೊಳಗೆ ನೀರು ಸೋರಿಕೆಯಾಗುತ್ತಿದೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಬಿಎಂಟಿಸಿ ವಿವಿಧ ಘಟಕಗಳಿಂದ ನಿತ್ಯ ಕನಿಷ್ಠ 25 ಬಸ್‌ಗಳು ಕೇಂದ್ರೀಯ ಕಾರ್ಯಾಗಾರಕ್ಕೆ ಬರುತ್ತವೆ. ಈ ವೇಳೆ ದೋಷ ಸರಿಪಡಿಸುವ ಜತೆಗೆ ಮೇಲ್ಛಾವಣಿ ಪರಿಶೀ ಲಿಸಲಾಗುತ್ತಿದೆ. ರಂಧ್ರಗಳು ಕಂಡು ಬಂದಲ್ಲಿ ತಕ್ಷಣ ದುರಸ್ತಿಗೊಳಿಸಲಾಗುತ್ತಿದೆ ಎಂದು ಕಾರ್ಯಾಗಾರದ ಅಧಿಕಾರಿಯೊಬ್ಬರು ತಿಳಿಸಿದರು.

ನೀರಿನ ಪುನರ್‌ ಬಳಕೆ: ಬಸ್‌ ಮೇಲ್ಛಾವಣಿಯಲ್ಲಿ ನೀರು ಸೋರಿಕೆ ಕಂಡು ಹಿಡಿಯಲು ಮೋಟಾರ್‌ ಸಹಾಯದಿಂದ ಬಸ್‌ ಮೇಲೆ ನೀರು ಸುರಿಸಲಾಗು ತ್ತಿದೆ. ಸೋರಿಕೆ ಕಂಡು ಬಂದರೆ ಆ ಜಾಗವನ್ನು ಗುರುತಿಸಿ ಬಳಿಕ ಅದನ್ನು ದುರಸ್ತಿ ಮಾಡಲಾಗುತ್ತಿದೆ. ನೀರು ಶೇಖರಣೆಗೆ ದೊಡ್ಡ ಗುಂಡಿ ಮಾಡಿದ್ದು, ಮೋಟರ್‌ ಸಹಾಯದಿಂದ ಬಸ್‌ಗಳ ಮೇಲೆ ನೀರು ಸುರಿಸಲಾಗುತ್ತಿದೆ. ಆ ನೀರು ಮತ್ತೊಂದು ಗುಂಡಿ ಯಲ್ಲಿ ಸಂಗ್ರಹಿಸಿ, ರಾಸಾಯನಿಕ ಮಿಶ್ರಣ ಮಾಡಿ ಮರು ಬಳಕೆ ಮಾಡಲಾಗುತ್ತಿದೆ.

ವರದಿ: ಮೋಹನ್ ಹಂಡ್ರಂಗಿ, ಕನ್ನಡಪ್ರಭ