ಬೆಂಗಳೂರು (ಜು. 10): ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಪ್ರಸಕ್ತ ಶೈಕ್ಷಣಿಕ ಸಾಲಿನ ರಿಯಾಯಿತಿ ದರದ ಸ್ಮಾರ್ಟ್‌ ಕಾರ್ಡ್‌ ಮಾದರಿಯ ವಿದ್ಯಾರ್ಥಿ ಬಸ್‌ ಪಾಸ್‌ ಪಡೆಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜು.25ರ ವರೆಗೂ ನಿಗಮ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

ಬಿಎಂಟಿಸಿಯು ಜೂ.13ರಿಂದ ವಿದ್ಯಾರ್ಥಿ ಬಸ್‌ ಪಾಸ್‌ಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದು, ಜೂ.17ರಿಂದ ಸ್ಮಾರ್ಟ್‌ ಕಾರ್ಡ್‌ ಮಾದರಿಯ ಬಸ್‌ ಪಾಸ್‌ ವಿತರಿಸುತ್ತಿದೆ. ಇದುವರೆಗೂ 1,54,099 ಅರ್ಜಿಗಳು ಸಲ್ಲಿಕೆಯಾಗಿದ್ದು, 60,001 ಪಾಸ್‌ಗಳನ್ನು ವಿತರಿಸಿದೆ.

ಇನ್ನೂ 26,668 ಅರ್ಜಿಗಳು ಶಿಕ್ಷಣ ಸಂಸ್ಥೆಯಿಂದ ಅನುಮೋದನೆ ಬಾಕಿಯಿದ್ದು, ಕೂಡಲೇ ಅನುಮೋದಿಸುವಂತೆ ಸೂಚನೆ ನೀಡಿದೆ. ಅನುಮೋದನೆಗೊಂಡಿರುವ 46,768 ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ, ದಿನಾಂಕ, ಸ್ಥಳವನ್ನು ನಿಗದಿಪಡಿಸಿಕೊಂಡು ಪಾಸ್‌ ಪಡೆದುಕೊಳ್ಳುವಂತೆ ಬಿಎಂಟಿಸಿ ತಿಳಿಸಿದೆ. ಜು. 25ರೊಳಗಾಗಿ ಇನ್ನೂ ಪಾಸ್‌ ಪಡೆಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ಪಾಸ್‌ ಪಡೆದುಕೊಳ್ಳಬೇಕು ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.