ಬ್ಲೂವೇಲ್​ ಗೇಮ್​ ಹೆಸರು ಕೇಳಿದ್ರೆ ಸಾಕು ಎಲ್ಲರ ಮೈ ಝುಮ್​​ ಅನಿಸುತ್ತೆ. ಇಂತಹದರಲ್ಲಿ ಸಿಲಿಕಾನ್​  ಸಿಟಿ ಬೆಂಗಳೂರಿಗೆ ಈ ಭಯಾನಕ ಬ್ಲೂ ವೇಲ್ ಗೇಮ್ ಕಾಲಿಟ್ಟಿದೆ. ಬ್ಲೂ ವೇಲ್​ ಗೇಮ್​ ಅಂತಿಮ ಹಂತ ತಲುಪಿದ ಯುವಕನೋರ್ವ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.

ಬೆಂಗಳೂರು(ಅ. 01): ಮಕ್ಕಳನ್ನ, ಯುವಕರನ್ನ ಟಾರ್ಗೆಟ್ ಮಾಡಿರೋ ಬ್ಲೂವೇಲ್ ಭೂತ, ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ. ಬ್ಲೂವೇಲ್​​ ಗೇಮ್'ನ ಅಂತಿಮ ಹಂತ ತಲುಪಿದ ಅಜೆಯ್ ಎಂಬಾತ, ಇಂದು ಬೆಂಗಳೂರಿನ ವಿಂಡ್ಸರ್​ ಮ್ಯಾನರ್​ ಹೋಟೆಲ್​​ ಬ್ರಿಡ್ಜ್​ ಮೇಲಿಂದ ಬಿದ್ದು ಆತ್ಮಹತ್ಯಗೆ ಮುಂದಾಗಿದ್ದ. ಅದೃಷ್ಟವಶಾತ್ ಪೊಲೀಸರು ಮತ್ತು ಸ್ಥಳೀಯರು ಆತನನ್ನು ಬಚಾವ್ ಮಾಡಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ 28 ವರ್ಷದ ಅಜೇಯ್ ಬಿಹಾರ್ ಮೂಲದವನೆಂದು ತಿಳಿದುಬಂದಿದೆ. ಮೈಸೂರಿನ ವಿಜಯನಗರದಲ್ಲಿ ಮನೆ ಮಾಡಿಕೊಂಡಿರುವ ಈತ ಎಂಬಿಎ ಮಾಡುತ್ತಿದ್ದಾನೆ. ಗಾಯಗೊಂಡಿರುವ ಈತನನ್ನ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು, ಈತನ ಕೈ ಮೇಲೆ ಕೆಲ ಗಾಯದ ಕಲೆಗಳಿದ್ದು, ಇದು ಕೂಡ ಬ್ಲೂವೇಲ್ ಗೇಮ್'​ನ ಪರಿಣಾಮ ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಈತನ ರಕ್ಷಣೆ ನಡೆಯುತ್ತಿರುವ ವೇಳೆ, "ಅವರು ನನ್ನನ್ನ ಸಾಯಿಸುತ್ತಾರೆ, ಅವರು ನನ್ನನ್ನ ಬಿಡಲ್ಲ" ಎಂದು ಅಜೇಯ್ ಹೇಳುತ್ತಿದ್ದನೆನ್ನಲಾಗಿದೆ.

ಈತ ವಿಂಡ್ಸರ್ ಮೇನಾರ್ ಸೇತುವೆ ಮೇಲಿಂದ ಈತ ಕೆಳಗೆ ಬೀಳಲು ಯತ್ನಿಸುತ್ತಿರುವ ವೇಳೆ ಸ್ಥಳೀಯರು ಈತನ ರಕ್ಷಣೆಗೆ ಹರಸಾಹಸ ಮಾಡಬೇಕಾಯಿತು. ಈತ ಅಕಸ್ಮಾತ್ ಕೆಳಗೆ ಬಿದ್ದರೆ ಸಾವು ಸಂಭವಿಸದಿರಲಿ ಎಂಬ ಉದ್ದೇಶದಿಂದ ಬ್ರಿಡ್ಜ್ ಕೆಳಗೆ ಬಿಎಂಟಿಸಿ ಬಸ್ಸನ್ನ ತಂದು ನಿಲ್ಲಿಸಲಾಯಿತು. ಬಳಿಕ, ಕೆಲ ಜನರು ಬಂದು ಈತನ ಕೈಗಳನ್ನು ಹಿಡಿದುಕೊಂಡರು. ನಂತರ, ಆತನನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.

ಆದರೆ, ಅಜೇಯ್ ತಾನು ಬ್ಲೂವೇಲ್ ಗೇಮ್ ಆಡುತ್ತಿರುವ ವಿಷಯವನ್ನು ಮಾತ್ರ ಬಾಯಿಬಿಟ್ಟಿಲ್ಲ. ತನಗೆ ಸಿಕ್ಕಾಪಟ್ಟೆ ಟಾರ್ಚರ್ ಆಗುತ್ತಿದೆ. ಅವರು ನನ್ನನ್ನ ಬಿಡುವುದಿಲ್ಲ, ಸಾಯಿಸುತ್ತಾರೆ ಎಂದೆಲ್ಲಾ ಬಡಬಡಿಸುತ್ತಾನೆ. ಈತ ತನ್ನ ಕೈಗಳನ್ನು ಬ್ಲೂವೇಲ್ ಮಾದರಿಯಲ್ಲಿ ಕುಯ್ದುಕೊಂಡಿದ್ದಾನೆ. ಇದನ್ನೆಲ್ಲಾ ಗಮನಿಸಿದರೆ ಮೇಲ್ನೋಟಕ್ಕೆ ಈತ ಬ್ಲೂವೇಲ್ ಗೇಮ್'ನ ಬಲಿಪಶುವಿನಂತೆ ತೋರುತ್ತದೆ.

ಬಿಹಾರದ ಮಧುಬನಿ ಜಿಲ್ಲೆಯ ಕನ್ನೇಲ್ ಪ್ರಸಾದ್ ಎಂಬುವರ ಮಗನಾದ ಅಜಯ್, ಎಂಬಿಎ ಪ್ರವೇಶ ಪರೀಕ್ಷೆಯ ತಯಾರಿಗಾಗಿ ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದನೆನ್ನಲಾಗಿದೆ. ಪೊಲೀಸರ ಮುಂದೆ ಹೆಂಗಸಿನ ರೀತಿಯಲ್ಲಿ ವರ್ತಿಸುತ್ತಿದ್ದ ಈತನ ಜೇಬಲ್ಲಿ ಎರಡೂವರೆ ಸಾವಿರ ರೂ., ಒಂದು ರೈಲ್ವೆ ಟಿಕೆಟ್ ಮತ್ತು ಎಟಿಎಂ ಕಾರ್ಡ್ ಇತ್ತು.

ಒಟ್ನಲ್ಲಿ ವಿಶ್ವದಾದ್ಯಂತ ಯುವಕರನ್ನ ಬಲಿತೆಗೆದುಕೊಳ್ತಿರೋ ಈ ಬ್ಲೂವೇಲ್ ಭೂತ, ಬೆಂಗಳೂರಿಗೂ ಕಾಲಿಟ್ಟಿರೋದು ಆತಂಕ ಸೃಷ್ಟಿಸಿದೆ.

ವರದಿ: ಮುತ್ತಪ್ಪ ಲಮಾಣಿ, ಸುವರ್ಣ ನ್ಯೂಸ್