ನವದೆಹಲಿ[ಮಾ.05]: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ನಡೆಸಿದ ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ ಮಡಿದ ಸಿಆರ್‌ಪಿಎಫ್‌ನ 40 ವೀರಯೋಧರ ಕುಟುಂಬಕ್ಕೆ 110 ಕೋಟಿ ರು. ದೇಣಿಗೆ ನೀಡುವ ಇಂಗಿತವನ್ನು ಅಂಧ ವಿಜ್ಞಾನಿಯೊಬ್ಬರು ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಕೋಟಾ ಮೂಲದ ಮುರ್ತಾಜಾ ಎ ಹಮೀದ್‌ ಎಂಬ 44 ವರ್ಷದ ಈ ವಿಜ್ಞಾನಿ, ಪುಲ್ವಾಮಾ ಹುತಾತ್ಮರಿಗಾಗಿ ತಮ್ಮ ತೆರಿಗೆ ಆದಾಯದಲ್ಲಿ 110 ಕೋಟಿ ರು. ಹಣವನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಲು ಮುಂದೆ ಬಂದಿದ್ದಾರೆ. ತಮ್ಮ ಮನದ ಇಂಗಿತವನ್ನು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಇ-ಮೇಲ್‌ ಮೂಲಕ ತಿಳಿಸಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಸಮಯವನ್ನೂ ಕೇಳಿದ್ದಾರೆ. ತಾವು ನೀಡಲು ಉದ್ದೇಶಿಸಿರುವ ಮೊತ್ತ ಸಣ್ಣದು ಎಂದು ತಿಳಿಸಿದ್ದಾರೆ.

ತಾಯ್ನಾಡಿಗಾಗಿ ಪ್ರಾಣಾರ್ಪಣೆ ಮಾಡಿದ ಯೋಧರಿಗೆ ನೆರವು ನೀಡುವ ಪ್ರೇರಣೆ ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ಇರಬೇಕು ಎಂದು ಮುರ್ತಾಜಾ ಅವರು ಆಂಗ್ಲದೈನಿಕವೊಂದಕ್ಕೆ ತಿಳಿಸಿದ್ದಾರೆ.

ಹುಟ್ಟಿದಾಗಿನಿಂದಲೂ ಅಂಧರಾಗಿರುವ ಈ ವಿಜ್ಞಾನಿ, ವಾಣಿಜ್ಯ ಪದವೀಧರ. ಮುಂಬೈನಲ್ಲಿ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ವಾಹನ ಅಥವಾ ವಸ್ತುವನ್ನು ಜಿಪಿಎಸ್‌, ಕ್ಯಾಮೆರಾ ಅಥವಾ ಇನ್ನಾವುದೇ ತಾಂತ್ರಿಕ ಉಪಕರಣದ ಸಹಾಯವಿಲ್ಲದೇ ಪತ್ತೆ ಹಚ್ಚುವ ನವೀನ ತಂತ್ರಜ್ಞಾನವನ್ನು ಕಂಡುಹಿಡಿದ ಕೀರ್ತಿ ಇವರದ್ದಾಗಿದೆ. ಆದರೆ, ಸರ್ಕಾರ ತಮ್ಮ ಸಂಶೋಧನೆಗೆ ತಕ್ಕ ಮಾನ್ಯತೆ ನೀಡಿಲ್ಲ ಎನ್ನುವ ಅವರು, ಪುಲ್ವಾಮಾದಂತಹ ದಾಳಿಯನ್ನು ತಪ್ಪಿಸಲು ತಾವು ಸಂಶೋಧಿಸಿರುವ ಉಪಕರಣವನ್ನು ಸರ್ಕಾರಕ್ಕೆ ಉಚಿತವಾಗಿ ನೀಡುವುದಾಗಿಯೂ ತಿಳಿಸಿದ್ದಾರೆ.