ನವದೆಹಲಿ :  ಶನಿವಾರದಿಂದ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭಗೊಂಡಿದೆ. ಈ ವೇಳೆ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್ ದೇಶವನ್ನು ಒಡೆಯುತ್ತಿದೆ ಎಂದು ಆರೋಪಿಸಿದ್ದು, ನಾವು ಮೇಕ್ ಇನ್ ಇಂಡಿಯಾ ಮಾಡಿದರೆ ಕಾಂಗ್ರೆಸ್ ಬ್ರೇಕಿಂಗ್ ಇಂಡಿಯಾ ಮಾಡಿದೆ ಎಂದಿದ್ದಾರೆ. 

ಅಲ್ಲದೇ ದೇಶದಲ್ಲಿ ಬಿಜೆಪಿ ಪ್ರತೀ ಚುನಾವಣೆಯಲ್ಲಿಯೂ ಕೂಡ ಗೆಲುವನ್ನು ಪಡೆಯುತ್ತಿದೆ. ತ್ರಿಪುರಾ ಹಾಗೂ ಕರ್ನಾಟಕದಲ್ಲಿಯೂ ಕೂಡ ನಾವು ಹೆಚ್ಚಿನ ಸ್ಥಾನಗಳನ್ನು ಪಡೆದೆವು. ಆದರೆ ವಿರೋಧ ಪಕ್ಷಗಳ ತಂತ್ರದಿಂದ ಸರ್ಕಾರ ರಚನೆಯಾಗಲಿಲ್ಲ. 

ಇನ್ನು ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಾಯಿತು. ಆದರೆ ವಿಶ್ವಾಸದಿಂದ ಅದನ್ನು ಗೆದ್ದೆವು. ನಮ್ಮ ಪ್ರಧಾನಿ ಅದನ್ನು ಒಂದು ಚಾಲೆಂಜ್ ಆಗಿ ಸ್ವೀಕಾರ ಮಾಡಿದರು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. 

ಅಲ್ಲದೇ ದೇಶದ ಆರ್ಥಿಕ ಅಭಿವೃದ್ಧಿ ಕುರಿತು ಪ್ರಸ್ತಾಪ ಮಾಡಿದ್ದು, ಬಿಜೆಪಿ ಅವಧಿಯಲ್ಲಿ ದೇಶದ ಆರ್ಥಿಕತೆಯು ಉತ್ತಮ ಸ್ಥಾನದಲ್ಲಿದೆ.  6 ನೇ ಉತ್ತಮ ಆರ್ಥಿಕತೆ ಎನಿಸಿಕೊಂಡಿದೆ ಎಂದರು. 

ಇನ್ನು ಕೆಲವೇ ತಿಂಗಳಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ವಿಪಕ್ಷಗಳು ಮಹಾಘಟಬಂಧನವನ್ನು ರಚಿಸಿಕೊಂಡು ಬಿಜೆಪಿ ಹಣಿಯಲು ಯತ್ನಿಸುತ್ತಿವೆ. ಆದರೆ ನಾವು ಈಗಾಗಲೇ ಆ ಮಹಾ ಘಟಬಂಧವನ್ನು ಸೋಲಿಸಿದ್ದೇವೆ. ಮುಂದೆಯೂ ಕೂಡ ಈ ಮಹಾಘಟ ಬಂಧನದ ಬಗ್ಗೆ ನಮಗ್ಯಾವ ಚಿಂತೆಯೂ ಇಲ್ಲ ಎಂದು ರಕ್ಷಣಾ ಸಚಿವೆ ತಮ್ಮ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.  

ಈಗಾಗಲೇ ನಮ್ಮ ಪಕ್ಷ 2ನೇ ಸ್ಥಾನದಲ್ಲಿರುವ ಬಂಗಾಳ, ಒಡಿಶಾ, ತೆಲಂಗಾಣದಲ್ಲಿ  ಸಂಪೂರ್ಣ ಪಡೆಯೊಂದಿಗೆ ಹೋರಾಡುವ ಮೂಲಕ ಅಧಿಕಾರ ಪಡೆಯಲು ಯತ್ನಿಸುತ್ತೇವೆ. ಬೃಹತ್ ರ್ಯಾಲಿಗಳನ್ನು ನಡೆಸುತ್ತೇವೆ. ಈ ಮೂಲಕ ಈ ರಾಜ್ಯಗಳಲ್ಲಿ ಅಧಿಕಾರ ಪಡೆಯಲು ಯತ್ನಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.