ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿರುವ ಬಿಜೆಪಿಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಅಮಿತ್ ಶಾ ಎಷ್ಟೇ ಸುಳ್ಳು ಹೇಳಿದರೂ ಬಿಜೆಪಿಯ ಮಿಷನ್-150 ಬದಲಿಗೆ ಮಿಷನ್-50 ಆಗಬಹುದಷ್ಟೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರು(ಆ.14): ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿರುವ ಬಿಜೆಪಿಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಅಮಿತ್ ಶಾ ಎಷ್ಟೇ ಸುಳ್ಳು ಹೇಳಿದರೂ ಬಿಜೆಪಿಯ ಮಿಷನ್-150 ಬದಲಿಗೆ ಮಿಷನ್-50 ಆಗಬಹುದಷ್ಟೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಮುಕ್ತ ಕರ್ನಾಟಕ ಎಂಬ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಗಲು ಕನಸು ನನಸಾಗಲ್ಲ. ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿಸುವ ಪ್ರಯತ್ನ ಏಕೆ ಮಾಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇರೆ ರಾಜ್ಯಗಳ ಚಿತ್ರಗಳನ್ನು ಬೆಂಗಳೂರು ರಸ್ತೆಗಳು ಎಂದು ಬಿಂಬಿಸುವುದು.

ಗಣೇಶ ಹಬ್ಬದ ಬಗ್ಗೆ ಸುಳ್ಳು ವದಂತಿ ಹಬ್ಬಿಸುವುದು. ಗಣೇಶ ಹಬ್ಬದ ಮೂರ್ತಿ ಪ್ರತಿಷ್ಠಾಪನೆಗೆ 10 ಲಕ್ಷ ರು. ಕಟ್ಟಬೇಕಂತೆ ಎಂದು ಸುಳ್ಳು ಸುದ್ದಿ ಹರಡುವುದು. ಆಲೂರು ವೆಂಕಟರಾಯ ರಸ್ತೆಗೆ ಟಿಪ್ಪು ಹೆಸರು ಇಡುವ ಹುನ್ನಾರ ನಡೆಸಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಜನರಿಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದೆ. ಜತೆಗೆ ಸುಳ್ಳುಗಳ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂದು ಬಿಂಬಿಸಲು ಯತ್ನಿಸುತ್ತಿದೆ. ಬಿಜೆಪಿಯ ಕುತಂತ್ರಗಳು ಜನರಿಗೆ ಅರ್ಥವಾಗಿದ್ದು ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಅಮಿತ್ ಶಾಗೆ ತಿರುಗೇಟು:

ಯಾವುದೇ ದಾಖಲೆ ಹಾಗೂ ಮಾಹಿತಿ ಇಲ್ಲದೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅತ್ಯಂತ ಭ್ರಷ್ಟ ಸರ್ಕಾರ ಎಂದು ಅಮಿತ್ ಶಾ ಸುಳ್ಳು ಆರೋಪ ಮಾಡಿದ್ದಾರೆ ಎಂದರು. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಗುಜರಾತ್‌ 3800 ಕೋಟಿ, ಮಹಾರಾಷ್ಟ್ರಕ್ಕೆ ₹8 ಸಾವಿರ ಕೋಟಿಅನುದಾನ ನೀಡಿದ್ದರೆ, ರಾಜ್ಯಕ್ಕೆ ಕೇವಲ ₹1500 ಕೋಟಿ ಮಾತ್ರ ಬರ ಪರಿಹಾರ ನೀಡುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರು ಟೀಕಿಸಿದರು.