ನವದೆಹಲಿ: ಪಶ್ಚಿಮ ಬಂಗಾಳದ ಒಂದೊಂದೇ ನಗರ ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರ ಹಿಡಿಯುತ್ತಿರುವ ಬಿಜೆಪಿ, ಇದೀಗ ಡಾರ್ಜಿಲಿಂಗ್‌ ನಗರಪಾಲಿಕೆಯಲ್ಲಿ ಸ್ಪಷ್ಟಬಹುಮತ ಪಡೆದುಕೊಂಡಿದೆ. 32 ಸದಸ್ಯ ಬಲದ ಡಾರ್ಜಿಲಿಂಗ್‌ ನಗರಪಾಲಿಕೆಯ 17 ಸದಸ್ಯರು ಗೋರ್ಖಾ ಜನಮುಕ್ತಿ ಮೋರ್ಚಾ ತೊರೆದು ದೆಹಲಿಯಲ್ಲಿ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 

ಇದರೊಂದಿಗೆ ಆ ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ ದೊರೆತಂತಾಗಿದೆ. ಮೂರು ದಿನಗಳ ಹಿಂದಷ್ಟೇ ತೃಣಮೂಲ ಕಾಂಗ್ರೆಸ್‌ ಸದಸ್ಯರನ್ನು ಸೆಳೆದು, ಬಂಗಾಳದ ಭಾಟ್‌ಪರಾ ನಗರಪಾಲಿಕೆಯಲ್ಲಿ ಬಿಜೆಪಿ ತನ್ನ ಪತಾಕೆ ಹಾರಿಸಿತ್ತು. 

ತನ್ಮೂಲಕ ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಯೊಂದರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಿತ್ತು. ಇದೀಗ ಬಂಗಾಳದಲ್ಲಿ 2ನೇ ನಗರಪಾಲಿಕೆಯನ್ನು ಆ ಪಕ್ಷ ವಶಕ್ಕೆ ತೆಗೆದುಕೊಂಡಿದೆ. ಗೋರ್ಖಾ ಜನಮುಕ್ತಿ ಮೋರ್ಚಾ ಕಳೆದ ಜನವರಿಯಲ್ಲಷ್ಟೇ ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಂಡಿತ್ತು.