ಅಮಿತ್ ಶಾ ಪತ್ರಿಕಾಗೋಷ್ಠಿಗೂ ಆಧಾರ್ ಕಡ್ಡಾಯ?ತಮಿಳುನಾಡು ರಾಜ್ಯ ಬಿಜೆಪಿ ಘಟಕದಿಂದ ಆದೇಶ?ಪಾಸ್ ಪಡೆಯಲು ಪತ್ರಕರ್ತರು ಆಧಾರ್ ತೋರಿಸಬೇಕುಅರ್ಜಿಯಲ್ಲಿ ವಿವರ ಭರ್ತಿ ಮಾಡಿದವರಿಗಷ್ಟೇ ಅವಕಾಶ 

ಚೆನ್ನೈ(ಜು.8):  ಆಧಾರ್ ಗುರುತಿನ ಚೀಟಿಯನ್ನು ದೇಶದ ಜನರ ನಿತ್ಯ ಬದುಕಿನ ಮೂಲಾಧಾರವಾಗಿ ಪರಿವರ್ತಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ಪರಿಣಾಮ ನೋಡುತ್ತಿದೆ.

ಇದೀಗ ಆಧಾರ್ ಕಡ್ಡಾಯ ಎಂಬುದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಗಣ್ಯ ವ್ಯಕ್ತಿಗಳ ಭೇಟಿಗೂ ಆಧಾರ್ ಬೇಕು ಎಂಬಂತಹ ಪರಿಸ್ಥಿತಿ ನಿರ್ಮಾಣವಾದಂತಿದೆ. ಹೌದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಆಧಾರ್ ಕಡ್ಡಾಯ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕ ಹೇಳಿರುವುದು ಅಚ್ಚರಿ ಮೂಡಿಸಿದೆ.

ಜುಲೈ 9ರಂದು ಚೆನ್ನೈನಲ್ಲಿ ಅಮಿತ್ ಷಾ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವ ಪತ್ರಕರ್ತರು, ಪಾಸ್ ಪಡೆಯಲು ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಯ ವಿವರ ಅಥವಾ ಚಾಲನಾ ಲೈಸನ್ಸ್ ಸಂಖ್ಯೆಯನ್ನು ನೀಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ತಮಿಳುನಾಡು ಬಿಜೆಪಿ ಘಟಕ ಈ ವಿವರಗಳನ್ನು ಕೇಳಿದ್ದು, ಪಾಸ್‍ಗಾಗಿ ಅರ್ಜಿ ನಮೂನೆ ಭರ್ತಿ ಮಾಡಿಕೊಡುವ ವೇಳೆ ಈ ವಿವರಗಳನ್ನೂ ಕಡ್ಡಾಯಪಡಿಸಲಾಗಿದೆ ಎನ್ನಲಾಗಿದೆ.

ಈ ಅರ್ಜಿಯ ಜೊತೆಗೆ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ ಲಗತ್ತಿಸುವಂತೆ ಸೂಚಿಸಲಾಗಿದೆ. ಚೆನ್ನೈನ ವಿಜಿಪಿ ಗೋಲ್ಡನ್ ಬೀಚ್ ರೆಸಾರ್ಟ್‍ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷರು ಮತಗಟ್ಟೆ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ಕುರಿತು ಸುದ್ದಿ ಮಾಡಲು ತೆರಳುವ ಪತ್ರಕರ್ತರಿಗೆ ವಾಹನಸಂಖ್ಯೆ, ಸಂಸ್ಥೆಯ ಹೆಸರು, ಸಂಪಾದಕರ ಹೆಸರು ಮತ್ತಿತರ ಮಾಹಿತಿ ಮೊದಲೇ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ.