ರಾಜೀನಾಮೆಗಾಗಿ ಅಧಿವೇಶನದಲ್ಲಿ ಪಟ್ಟು | ಬಿಜೆಪಿ ಕೋರ್ ಕಮಿಟಿ ಸಭೆ ನಿರ್ಧಾರ
ಮಂಗಳೂರು: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ವಿಚಾರವನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಗಟ್ಟಿ ದನಿಯಲ್ಲಿ ಪ್ರಸ್ತಾಪಿಸಲು ಬಿಜೆಪಿ ನಿರ್ಧರಿಸಿದೆ. ಅಧಿವೇಶನದ ಮೊದಲ ದಿನವೇ ಕೆ.ಜೆ.ಜಾರ್ಜ್ ರಾಜೀನಾಮೆಗೆ ಪಟ್ಟುಹಿಡಿಯಲು ಮಂಗಳೂರಿನಲ್ಲಿ ಗುರುವಾರ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಜಾರ್ಜ್ ರಾಜೀನಾಮೆ ಪಡೆಯುವಂತೆ ಸದನ ಆರಂಭಕ್ಕೆ ಮೊದಲೇ ರಾಜ್ಯ ಸರ್ಕಾರಕ್ಕೆ ಬಿಜೆಪಿ ಸಲಹೆ ನೀಡಲಿದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದರೆ ಮೊದಲು ಕಳಂಕಿತ ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಅಧಿವೇಶನದ ಮೊದಲ ದಿನ ದಿಂದಲೇ ಹೋರಾಟ ಆರಂಭಿಸಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಹದಗೆಟ್ಟ ಕಾನೂನು ಸುವ್ಯವಸ್ಥೆ ವಿರುದ್ಧ ಸದನದ ಒಳ ಹಾಗೂ ಹೊರಗೆ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದ್ದು, ನ.13ರಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಇದನ್ನೇ ಪ್ರಬಲ ಅಸ್ತ್ರವನ್ನಾಗಿ ಬಳಸಲಿದೆ. ಅಲ್ಲದೆ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲೂ ರಾಜ್ಯ ಸರ್ಕಾರದ ವಿರುದ್ಧ ಟೀಕಾಸ್ತ್ರವನ್ನು ಇನ್ನಷ್ಟು ತೀವ್ರಗೊಳಿಸಲಿದೆ ಎಂದು ಮಾಹಿತಿ ನೀಡಿದರು.
ಪರಿವರ್ತನಾ ಯಾತ್ರೆಯನ್ನು ಯಶಸ್ವಿಗೊಳಿಸುವ ಬಗ್ಗೆ ಚರ್ಚಿಸಲಾಗಿದೆ. ಕರಾವಳಿಯ ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಮೂಲಕ ಹಾದುಹೋಗುವ ಯಾತ್ರೆ ಅಧಿವೇಶನದ ವೇಳೆ ಬೆಳಗಾವಿಯನ್ನು ತಲುಪಲಿದೆ. ಆಗ ಸದನದ ಒಳಗೆ ಹಾಗೂ ಹೊರಗೆ ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಧ್ವನಿ ಎತ್ತರಿಸಲಾಗುವುದು ಎಂದರು.
