ನವದೆಹಲಿ: ಮುಂದಿನ ತಿಂಗಳಿನ ಒಳಗಾಗಿ ಸಾರ್ವತ್ರಿಕ ಲೋಕಸಭೆ ಚುನಾವಣೆ ದಿನಾಂಕ ಪ್ರಕಟಗೊಳ್ಳಲಿರುವ ಹಿನ್ನೆಲೆಯಲ್ಲಿ ಪ್ರಣಾಳಿಕೆ ತಯಾರಿ ಸಿದ್ಧತೆ ಆರಂಭಿಸಿರುವ ಬಿಜೆಪಿ, ದೇಶದ 10 ಕೋಟಿ ಜನರಿಂದ ಸಲಹೆ ಪಡೆಯಲು ಬೃಹತ್ ಅಭಿಯಾನವೊಂದನ್ನು ಆರಂಭಿಸಿದೆ. ‘ಭಾರತ್ ಕೆ ಮನ್ ಕೀ ಬಾತ್, ಮೋದಿ ಕೆ ಸಾಥ್’ (ಭಾರತದ ಮನದ ಮಾತು, ಮೋದಿ ಜತೆ) ಎಂಬ ಅಭಿಯಾನ ಇದಾಗಿದ್ದು, 1 ತಿಂಗಳು ನಡೆಯಲಿದೆ. 

ಅಭಿಯಾನಕ್ಕೆ ‘ಕಾಮ್ ಕರೇ ಜೋ, ಉಮ್ಮೀದ್ ಉಸೀ ಸೇ ಲೋ’ (ಕೆಲಸ ಮಾಡುವವರಿಂದಲೇ ಬೇಕು- ಬೇಡಗಳ ಸಲಹೆ ಪಡೆಯಿರಿ) ಎಂಬ ಉಪಶೀರ್ಷಿಕೆಯನ್ನೂ ಇಡಲಾಗಿದೆ. ಜನರಿಂದ ಅಭಿಪ್ರಾಯ ಪಡೆದು, ಪಕ್ಷದ ಪ್ರಣಾಳಿಕೆಯಾದ ‘ಸಂಕಲ್ಪ ಪತ್ರ’ವನ್ನು ತಯಾರಿಸಲಾಗುತ್ತದೆ.  

ಈ ಅಭಿಯಾನಕ್ಕೆ ದೆಹಲಿಯ ಹೋಟೆಲೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಣಾಳಿಕೆ ಸಮಿತಿ ಮುಖ್ಯಸ್ಥ ರಾಜನಾಥ ಸಿಂಗ್ ಭಾನುವಾರ ಚಾಲನೆ ನೀಡಿದರು. ಅದೇ ಹೋಟೆಲ್‌ನ ಮಾಣಿಯೊಬ್ಬರಿಂದ ಪ್ರಣಾಳಿಕೆಗೆ ಮೊದಲ ಸಲಹೆಯನ್ನು ಬಿಜೆಪಿ ಪಡೆಯಿತು. ದೇಶದ ಇತಿಹಾಸದಲ್ಲಿ ಯಾವುದೇ ರಾಜಕೀಯ ಪಕ್ಷ ಇಂತಹ ಕಸರತ್ತು ನಡೆಸಿರಲಿಲ್ಲ ಎಂದು ಶಾ ತಿಳಿಸಿದರು.

4000 ಕ್ಷೇತ್ರ, 300 ವಾಹನ, 7500 ಪೆಟ್ಟಿಗೆ!: 300 ವಾಹನಗಳು ದೇಶಾದ್ಯಂತ ಸುತ್ತಲಿವೆ. 4000 ವಿಧಾನಸಭಾ ಕ್ಷೇತ್ರಗಳಲ್ಲಿ 7500 ಪೆಟ್ಟಿಗೆಗಳ ಮೂಲಕ ಜನರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ದೂರವಾಣಿ, ಸಾಮಾಜಿಕ ಜಾಲ ತಾಣ ಹಾಗೂ ಇನ್ನಿತರೆ ವಿಧಾನಗಳ ಮೂಲಕ ಜನರಿಂದ 12 ವಿಷಯವಾಗಿ ಅಭಿಪ್ರಾಯ ಸಂಗ್ರಹಿಸ ಲಾಗುತ್ತದೆ ಎಂದು ರಾಜನಾಥ ಸಿಂಗ್ ತಿಳಿಸಿದರು.