ರಾಜ್ಯದಲ್ಲಿ 3 ದಿನ ‘ಕಮಲ ಜಾತ್ರೆ’

First Published 1, Mar 2018, 3:45 PM IST
BJP To Hold Kamala Jatre
Highlights
  • ನಾಳೆಯಿಂದ 9 ಜಿಲ್ಲೆಗಳ ಆಯ್ದ 9 ಅಸೆಂಬ್ಲಿ ಕ್ಷೆೀತ್ರಗಳಲ್ಲಿ ಆಯೋಜನೆ
  • ಗ್ರಾಮೀಣ ಸೊಗಡಿನ ಆಟೋಟ, ಮನರಂಜನಾ ಜಾತ್ರೆ ನಡೆಸಿ ಪ್ರಚಾರ

ಬೆಂಗಳೂರು: ಪಕ್ಷದ ಚುನಾವಣಾ ಪ್ರಚಾರದ ಸಭೆ- ಸಮಾರಂಭಗಳಲ್ಲಿ ಪಾಲ್ಗೊಳ್ಳದೇ ದೂರ ಉಳಿದ ಜನರನ್ನು ಸೆಳೆಯುವ ಉದ್ದೇಶದಿಂದ ರಾಜ್ಯ ಬಿಜೆಪಿಯು ‘ಕಮಲ ಜಾತ್ರೆ’ ಎಂಬ ವಿಶಿಷ್ಟ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದೆ.

ಇದೇ ಮಾ.2ರಿಂದ (ಶುಕ್ರವಾರ) ಮೂರು ದಿನಗಳ ಕಾಲ 9 ಜಿಲ್ಲೆಗಳ 9 ಆಯ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಜಾತ್ರೆ ನಡೆಯಲಿದ್ದು, ಗ್ರಾಮೀಣ ಸೊಗಡಿನ ಆಟೋಟ, ಮನರಂಜನೆಯನ್ನು ಒಳಗೊಂಡ ಜಾತ್ರೆ ಮಾದರಿ ಮೂಲಕ ಜನರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಸಾಧನೆಗಳನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ. ಭಾಲ್ಕಿ, ಕಲಬುರಗಿ ದಕ್ಷಿಣ, ಯಾದಗಿರಿ, ರಾಯಚೂರು ಗ್ರಾಮೀಣ, ಗಂಗಾವತಿ, ಹಗರಿಬೊಮ್ಮನಹಳ್ಳಿ, ನಂಜನಗೂಡು, ತುಮಕೂರು ಗ್ರಾಮೀಣ ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕಮಲ ಜಾತ್ರೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ, ಲೋಕಸಭಾ ಚುನಾವಣೆ ವೇಳೆ ಚಾಯ್ ಪೇ ಚರ್ಚಾ, 3ಡಿ ರ್ಯಾಲಿಗಳನ್ನು ಆಯೋಜಿಸಲಾಗಿತ್ತು.

ನಂತರ ಕಳೆದ ವರ್ಷ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ಕಮಲ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಅದು ಸಾಕಷ್ಟು ಯಶಸ್ವಿಯೂ ಆಗಿತ್ತು. ಈ ಹಿನ್ನೆಲೆಯಲ್ಲಿ ಅದನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.

ಇದನ್ನು ಪ್ರಾಯೋಗಿಕವಾಗಿ ಮೊದಲು ಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ಫೆ.16ರಿಂದ 18ರವರೆಗೆ 3 ದಿನ ಆಯೋಜಿಸಲಾಗಿತ್ತು. ಆ ಜಾತ್ರೆಯಲ್ಲಿ ಸುಮಾರು 54 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅದರ ಯಶಸ್ಸಿನ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಒಟ್ಟು 30 ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪ್ರತಿ ವಾರಾಂತ್ಯ ಈ ಜಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುಮಾರು ನಾಲ್ಕು ಸಾವಿರ ಚದರಡಿ ವಿಸ್ತೀರ್ಣದ ಪ್ರದೇಶದಲ್ಲಿ ಮ್ಯೂಸಿಕಲ್ ಚೇರ್, ರಸಪ್ರಶ್ನೆ, ರಸಮಂಜರಿ ಮೂಲಕ ಜನರನ್ನು ರಂಜಿಸುವುದರೊಂದಿಗೆ ಕಾರ್ಯಕ್ರಮ ನಡೆಸಿಕೊಡುವ ನಿರೂಪಕರು ಬಿಜೆಪಿಯ ಸಾಧನೆಗಳನ್ನು ವಿವರಿಸಲಿದ್ದಾರೆ ಎಂದರು.

loader