ಕೋಲ್ಕತ್ತಾ(ಜೂ.05): ಜೈ ಮಹಾ ಕಾಳಿ, ಜೈ ಶ್ರೀರಾಮ ಘೋಷಣೆಯೊಂದಿಗೆ ಪ.ಬಂಗಾಳಕ್ಕೆ ಲಗ್ಗೆ ಇಟ್ಟಿರುವ ಬಿಜೆಪಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಪಾರಮ್ಯ ಮೆರೆದಿದೆ. 

ಲೋಕಸಭಾ ಚುನಾವಣೆ ಬಳಿಕ ಬಂಗಾಳದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. 

ಒಟ್ಟು 34 ವಾರ್ಡ್‌ಗಳ ಪೈಕಿ 26 ಕೌನ್ಸಿಲರ್‌ಗಳು ಬಿಜೆಪಿ ಪರ ಮತ ನೀಡಿದ್ದು, 8 ಕೌನ್ಸಿಲರ್‌ಗಳು ಮತದಾನದಿಂದ ದೂರ ಉಳಿಯುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. 

ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಆಡಳಿತ ಆರಂಭವಾಗಿದ್ದು, ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ. 

ಭಾತ್‌ಪಾರಾ ನಗರಸಭೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವ ಮೂಲಕ ಟಿಎಂಸಿಯಿಂದ ಅಧಿಕಾರ ಕಸಿದುಕೊಂಡಿದೆ. ಉತ್ತರ 24 ಪರಗಣ ಜಿಲ್ಲೆಯ ಬರಾಕ್‌ಪೋರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಸಹೋದರ ಸೌರವ್ ಸಿಂಗ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.