Asianet Suvarna News Asianet Suvarna News

ಪಿಡಿಪಿಗೆ ನೀಡಿದ್ದ ಬೆಂಬಲ ಹಿಂಪಡೆದ ಬಿಜೆಪಿ; ಕಾಶ್ಮೀರ ಸರ್ಕಾರ ಪತನ

ಪ್ರತಿಪಕ್ಷಗಳಿಂದ ‘ಅಪವಿತ್ರ ಮೈತ್ರಿ’ ಎಂದೇ ಕರೆಯಲ್ಪಡುತ್ತಿದ್ದ ಹಾಗೂ ಕಣಿವೆ ರಾಜ್ಯದಲ್ಲಿ ನಡೆಯುತ್ತಿದ್ದ ವ್ಯಾಪಕ ಹಿಂಸೆ/ಭಯೋತ್ಪಾದಕ ಚಟುವಟಿಕೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಜಮ್ಮು-ಕಾಶ್ಮೀರದ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಮಂಗಳವಾರ ಪತನಗೊಂಡಿದೆ. 

BJP snaps alliance with PDP in Jammu and Kashmir, Governor recommends central rule

ನವದೆಹಲಿ (ಜೂ. 20):  ಪ್ರತಿಪಕ್ಷಗಳಿಂದ ‘ಅ ಪವಿತ್ರ ಮೈತ್ರಿ’ ಎಂದೇ ಕರೆಯಲ್ಪಡುತ್ತಿದ್ದ ಹಾಗೂ ಕಣಿವೆ ರಾಜ್ಯದಲ್ಲಿ ನಡೆಯುತ್ತಿದ್ದ ವ್ಯಾಪಕ ಹಿಂಸೆ/ಭಯೋತ್ಪಾದಕ ಚಟುವಟಿಕೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಜಮ್ಮು-ಕಾಶ್ಮೀರದ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಮಂಗಳವಾರ ಪತನಗೊಂಡಿದೆ.

‘ರಾಜ್ಯದಲ್ಲಿ ಉಗ್ರವಾದ ಮಿತಿಮೀರಿದ್ದು, ರಾಜ್ಯದಲ್ಲಿನ ಪರಿಸ್ಥಿತಿ ಅಸಹನೀಯವಾಗಿದೆ’ ಎಂದು ಬಿಜೆಪಿ ದಿಢೀರನೇ ಬೆಂಬಲ ವಾಪಸ್‌ ಪಡೆದಿದ್ದು, 4 ವರ್ಷದಷ್ಟುಹಳೆಯದಾದ ದೋಸ್ತಿ ಸರ್ಕಾರದ ಆಳ್ವಿಕೆ ಅಂತ್ಯಗೊಂಡಿದೆ. ಅಲ್ಲದೆ, ಯಾವುದೇ ಇತರ ಪಕ್ಷಗಳು ಹೊಂದಾಣಿಕೆಗೆ ಮುಂದಾಗದ ಕಾರಣ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಸನ್ನಿಹಿತವಾಗಿದೆ. ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ‘ರಾಜ್ಯಪಾಲರ ಆಳ್ವಿಕೆ’ಗೆ ಶಿಫಾರಸು ರವಾನಿಸಿದ್ದು, ಕೇಂದ್ರದ ಹಾಗೂ ರಾಷ್ಟ್ರಪತಿಗಳ ಅನುಮೋದನೆಯ ಔಪಚಾರಿಕತೆ ಮಾತ್ರ ಬಾಕಿ ಇದೆ.

ಜಮ್ಮು-ಕಾಶ್ಮೀರದ ಎಲ್ಲ ಬಿಜೆಪಿ ಸಚಿವರನ್ನು ದಿಢೀರನೇ ದಿಲ್ಲಿಗೆ ಕರೆಸಿಕೊಂಡ ಬಿಜೆಪಿ ವರಿಷ್ಠರು ಏಕಾಏಕಿ ಈ ನಿರ್ಧಾರ ತೆಗದುಕೊಂಡಿದ್ದಾರೆ. ಪಕ್ಷದ ನಿರ್ಧಾರವನ್ನು ಜಮ್ಮು-ಕಾಶ್ಮೀರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮಮಾಧವ್‌ ಅವರು ತುರ್ತು ಸುದ್ದಿಗೋಷ್ಠಿ ಕರೆದು ಪ್ರಕಟಿಸಿದರು. ಈ ವಿಷಯವನ್ನು ರಾಜ್ಯಪಾಲ ಎನ್‌.ಎನ್‌. ವೋಹ್ರಾ ಅವರು ತಿಳಿಸುವವರೆಗೆ ಪಿಡಿಪಿ ಮುಖ್ಯಸ್ಥೆ ಹಾಗೂ ನಿರ್ಗಮಿತ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೂ ತಮ್ಮ ಸರ್ಕಾರ ಪತನ ಹೊಂದುವ ವಿಷಯ ಗೊತ್ತಿರಲಿಲ್ಲ. ಬೆಂಬಲ ಹಿಂಪಡೆವ ಮುನ್ನ ಮುಫ್ತಿಗೆ ‘ಬೆಂಬಲ ವಾಪಸಿ’ ವಿಷಯವನ್ನೇ ಬಿಜೆಪಿ ತಿಳಿಸಲಿಲ್ಲ ಎಂದು ಮೂಲಗಳು ಹೇಳಿವೆ.

ಇದಾದ ಕೆಲ ಗಂಟೆಗಳಲ್ಲಿ ಮುಫ್ತಿ ಅವರು ರಾಜ್ಯಪಾಲ ವೋಹ್ರಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಅಲ್ಲದೆ, ‘ಕಾಶ್ಮೀರದಲ್ಲಿ ಬಲಪ್ರಯೋಗ ನಡೆಯದು’ ಎಂದು ಬಿಜೆಪಿಗೆ ಟಾಂಗ್‌ ನೀಡಿ, ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದರು. ಇದೇ ವೇಳೆ, ಪ್ರಮುಖ ವಿಪಕ್ಷವಾದ ನ್ಯಾಷನಲ್‌ ಕಾನ್ಫರೆನ್ಸ್‌ ನೇತಾರ ಒಮರ್‌ ಅಬ್ದುಲ್ಲಾ ಅವರು, ಯಾವುದೇ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸುವ ಇರಾದೆ ತಮಗಿಲ್ಲ ಎಂದು ಪ್ರಕಟಿಸಿದರು. ಇನ್ನು ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಕೂಡ ಪಿಡಿಪಿ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಜತೆ ಸೇರಿ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹೀಗಾಗಿ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಅನಿವಾರ್ಯವಾಗಿದ್ದು, ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲರ ಆಳ್ವಿಕೆ ಅವಧಿಯ ವೇಳೆಯೂ ಯಾವುದೇ ಪಕ್ಷಗಳು ಸರ್ಕಾರ ರಚಿಸದೇ ಹೋದರೆ ಚುನಾವಣೆ ಅನಿವಾರ್ಯವಾಗಲಿದೆ. ಜಮ್ಮು-ಕಾಶ್ಮೀರವು ರಾಜ್ಯಪಾಲರ ಆಳ್ವಿಕೆಗೆ ಒಳಪಡುತ್ತಿರುವುದು 8ನೇ ಸಲ.

ಬೆಂಬಲ ದಿಢೀರ್‌ ವಾಪಸ್‌:

ಜಮ್ಮು-ಕಾಶ್ಮೀರ ಬಿಜೆಪಿ ನಾಯಕರು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಜತೆ ದಿಲ್ಲಿಯಲ್ಲಿ ಮಂಗಳವಾರ ಮಧ್ಯಾಹ್ನ ತುರ್ತು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ರಾಮ ಮಾಧವ್‌ ಅವರು ಮೆಹಬೂಬಾ ಮುಫ್ತಿ ಸರ್ಕಾರಕ್ಕೆ ನೀಡಲಾಗಿರುವ ಬೆಂಬಲವನ್ನು ಬಿಜೆಪಿ ಹಿಂಪಡೆಯಲಿದೆ ಎಂದು ಘೋಷಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರ ಜತೆ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉಗ್ರವಾದ ಹಾಗೂ ತೀವ್ರವಾದವು ರಾಜ್ಯದಲ್ಲಿ ಹೆಚ್ಚುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಕೂಡ ದಮನವಾಗುತ್ತಿದೆ. ಪತ್ರಕರ್ತ ಶುಜಾತ್‌ ಬುಖಾರಿ ಅವರ ಹತ್ಯೆಯೇ ಇತ್ತೀಚಿನ ನಿದರ್ಶನ’ ಎಂದು ಮಾಧವ್‌ ವಿವರಿಸಿದರು.

‘ಹೀಗಾಗಿ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಹಾಗೂ ಜಮ್ಮು-ಕಾಶ್ಮೀರದ ಹಿತವನ್ನು ಗಮನದಲ್ಲಿ ಇರಿಸಿಕೊಂಡಾಗ ಸರ್ಕಾರದಲ್ಲಿ ಮುಂದುವರಿಯುವುದು ಬಿಜೆಪಿಗೆ ಅಸಹನೀಯವಾಗುತ್ತಿದೆ. ಪಕ್ಷವು ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆಯನ್ನು ಬಯಸುತ್ತದೆ’ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರವು ಕಣಿವೆ ರಜ್ತಕ್ಕೆ ಎಲ್ಲ ನೆರವು ನೀಡಿತು. ಪಾಕಿಸ್ತಾನದ ಕದನವಿರಾಮ ಉಲ್ಲಂಘನೆಗೆ ಪೂರ್ಣವಿರಾಮ ಹಾಕುವ ಯತ್ನ ಮಾಡಿತು. ಆದರೆ ಪಿಡಿಪಿ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಲಿಲ್ಲ. ಜಮ್ಮು ಹಾಗೂ ಲಡಾಖ್‌ನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಾಗ ನಮ್ಮ ನಾಯಕರು ಪಿಡಿಪಿಯಿಂದ ತುಂಬ ತೊಂದರೆ ಅನುಭವಿಸಿದರು ಎಂದು ಮಾಧವ್‌ ಆಪಾದಿಸಿದರು.

‘ಆದರೆ ಪಿಡಿಪಿಯ ಉದ್ದೇಶಗಳನ್ನು ನಾವು ಪ್ರಶ್ನಿಸುತ್ತಿಲ್ಲ. ರಾಜ್ಯದ ಸ್ಥಿತಿ ಸುಧಾರಿಸಲು ಅವರು ವಿಫಲರಾದರು’ ಎಂದು ಅವರು ಸ್ಪಷ್ಟಪಡಿಸಿದರು.

ಮೆಹಬೂಬಾ ತಿರುಗೇಟು:

ಈ ನಡುವೆ, ಮೆಹಬೂಬಾ ಮುಫ್ತಿ ಅವರು ಶ್ರೀನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ‘ನಮ್ಮ ಸರ್ಕಾರವು ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಯತ್ನಿಸಿತು. ಜನರಲ್ಲಿ ವಿಶ್ವಾಸ ಮೂಡಿಸಿ ಶಾಂತಿ ಸ್ಥಾಪಿಸಲು ಯತ್ನಿಸಿದೆವು. ಆದರೆ ನಮ್ಮದೇ ಜನರ ಮೇಲೆ ತೋಳ್ಬಲ ಪ್ರದರ್ಶಿಸುವುದು ಕಾಶ್ಮೀರದಲ್ಲಿ ನಡೆಯದು’ ಎಂದು ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಉಗ್ರರ ಮೇಲೆ ಬಲಪ್ರಯಯೋಗಿಸಿ ಶಾಂತಿ ಸ್ಥಾಪಿಸುವವ ಯತ್ನ ನಡೆಸುತ್ತಿರುವುದನ್ನು ಟೀಕಿಸಿದರು.

‘ಕಲ್ಲು ತೂರಾಟಗಾರರಿಗೆ ಕ್ಷಮಾದಾನ, ಕದನ ವಿರಾಮ- ಹೀಗೆ ಹತ್ತು ಹಲವಾರು ಶಾಂತಿಕ್ರಮಗಳನ್ನು ಕಣಿವೆ ರಾಜ್ಯದಲ್ಲಿ ನಮ್ಮ ಸರ್ಕಾರ ಕೈಗೊಂಡಿತು. ಶಾಂತಿ ಮರುಸ್ಥಾಪನೆ ಉದ್ದೇಶದಿಂದ ನಮ್ಮ ಸರ್ಕಾರ ಕೆಲಸ ಮಾಡಿತೇ ವಿನಾ ಅಧಿಕಾರದ ರಾಜಕೀಯದ ಹಿಂದೆ ನಾನು ಬಿದ್ದಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪಿಡಿಪಿ ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಉದ್ದೇಶ ಹೊಂದಿಲ್ಲ. ಹೀಗಾಗಿ ನನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ’ ಎಂದು ಅವರು ಘೋಷಿಸಿದರು. 

Follow Us:
Download App:
  • android
  • ios