ವಿಧಾನಸಭೆ[ಆ.01]: ಮನುಸ್ಮೃತಿ, ಹಿಂದುತ್ವದ ವೈಚಾರಿಕತೆಯನ್ನು ಪ್ರತಿನಿಧಿಸುವ ಸಂಘಟನೆಯಿಂದ ಬಂದಿದ್ದರೂ ನಿಮ್ಮ ನಿಷ್ಠೆ ಸಂವಿಧಾನಕ್ಕೆ ಮಾತ್ರ ಇರಬೇಕು. ಸಂಘ ಪರಿವಾರದ ಸೋಂಕಿನಿಂದ ಹೊರನಿಂತು ಸಂವಿಧಾನಕ್ಕೆ ಬದ್ಧರಾಗಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಅವರು ನೂತನ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಉದ್ದೇಶಿಸಿ ಹೇಳಿದ ಮಾತಿಗೆ ಬಿಜೆಪಿ ನಾಯಕರು ಹಿಂದುತ್ವದ ಬಗ್ಗೆ ವ್ಯಾಖ್ಯಾನ ನೀಡಿದ ಪ್ರಸಂಗ ಸದನದಲ್ಲಿ ಬುಧವಾರ ನಡೆಯಿತು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುವ ಸಂದರ್ಭದಲ್ಲಿ ಆರ್‌ಎಸ್‌ಎಸ್‌, ಎಬಿವಿಪಿ, ಬಿಜೆಪಿ ಸಂಬಂಧವನ್ನು ಬಿಟ್ಟು ಈ ಸ್ಥಾನಕ್ಕೆ ಬಂದಿದ್ದೀರಿ. ಹೀಗಾಗಿ ನಿಮಗೆ ಈಗ ಸಂಘ ಪರಿವಾರದ ಯಾವುದೇ ಸೋಂಕು ಇಲ್ಲ. ಸಭಾಧ್ಯಕ್ಷರು ಯಾರೇ ಆಗಲಿ ಅವರು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಮಾತಿಗೆ ಪ್ರತಿಯಾಗಿ ಬಿಜೆಪಿಯ ಜಗದೀಶ ಶೆಟ್ಟರ್‌, ತಾವು ಆರ್‌ಎಸ್‌ಎಸ್‌ ಸ್ವಯಂಸೇವಕ ಎಂದು ಗರ್ವದಿಂದ ಹೇಳಿಕೊಳ್ಳುತ್ತೇನೆ. ಮನುವಾದಿ, ಹಿಂದು ಧರ್ಮ ಎಂದೆಲ್ಲ ಮಾತನಾಡುವ ಮೂಲಕ ನಮ್ಮನ್ನು ಬೇರೆ ಮಾಡುವ ಪ್ರಯತ್ನ ಬಹಳ ಕಾಲದಿಂದ ನಡೆಯುತ್ತಾ ಬಂದಿದೆ. ಆದರೆ ಇದು ನಡೆಯುವುದಿಲ್ಲ. ಸಂಘ ಪರಿವಾರದವರಾಗಿದ್ದರೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕ್ಷೇತ್ರದ ಜನರನ್ನು ಸಮನಾಗಿ ನೋಡಿದ್ದರಿಂದಲೇ ಸತತವಾಗಿ ಆರು ಬಾರಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದರು.

ಇನ್ನು ಮಾಜಿ ಸಭಾಧ್ಯಕ್ಷ ರಮೇಶಕುಮಾರ್‌, ಮನುಸ್ಮೃತಿ, ಹಿಂದುತ್ವದ ವೈಚಾರಿಕತೆಯನ್ನು ಪ್ರತಿನಿಧಿಸುವ ಸಂಘಟನೆಯಿಂದ ಬಂದಿದ್ದರೂ ನಿಮ್ಮ ನಿಷ್ಠೆ ಸಂವಿಧಾನಕ್ಕೆ ಮಾತ್ರ ಇರಬೇಕು ಎಂದು ಮಾರ್ಮಿಕವಾಗಿ ಹೇಳಿದ ಮಾತಿಗೆ ಕೊಂಚ ತೀವ್ರವಾಗಿ ಪ್ರತಿಕ್ರಿಯಿಸಿದ ಕೆ.ಎಸ್‌.ಈಶ್ವರಪ್ಪ, ‘ಹಿಂದುತ್ವ’ ಎಂದರೆ ಸಂಕುಚಿತ ಮನಸ್ಥಿತಿ ಅಲ್ಲ, ಎಲ್ಲರನ್ನೂ ಸಮನಾಗಿ ಕಾಣುವ ಮನಸ್ಥಿತಿ ಎಂಬುದನ್ನು ಪೀಠದ ಮೂಲಕ ನೂತನ ಸಭಾಧ್ಯಕ್ಷರು ತೋರಿಸುತ್ತಾರೆ. ಆರ್‌ಎಸ್‌ಎಸ್‌ ಸ್ವಯಂ ಸೇವಕನ ರೀತಿಯಲ್ಲಿ ನಡೆದುಕೊಂಡು ಹೋಗುತ್ತೀರಿ ಎಂಬ ವಿಶ್ವಾಸ ತಮಗಿದೆ ಎಂದು ತಿರುಗೇಟು ನೀಡಿದರು.

ರಮೇಶಕುಮಾರ್‌, ಸಿದ್ದರಾಮಯ್ಯ ಅವರು, ಸಭಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹಿಂದುತ್ವ, ಸಂಘ-ಪರಿವಾರದ ಸೋಂಕಿನಿಂದ ಹೊರಬಂದಿದ್ದಿರಿ ಎಂದು ಹೇಳಿರುವುದು ಸಭಾಧ್ಯಕ್ಷರಿಗೆ ಸವಾಲು ಆಗಿದೆ. ನಮ್ಮನ್ನು ಕಡಿದರೂ ಹಿಂದುತ್ವ ವಿಚಾರವನ್ನು ನಾವು ಬಿಡುವುದಿಲ್ಲ ಎಂದು ಏರಿದ ದನಿಯಲ್ಲಿ ಹೇಳಿದರು.

ಹಿಂದುತ್ವ ಎಂದರೆ ಅದೊಂದು ಧರ್ಮ ಅಲ್ಲ, ಜೀವನ ಪದ್ಧತಿ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಈಗ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿ ಸಭಾಧ್ಯಕ್ಷ ಪೀಠವನ್ನು ಕಾಗೇರಿ ಅವರು ಅಲಂಕರಿಸಿರುವುದರಿಂದ ಈ ಮಾತು ಹೇಳಲಾಗುತ್ತಿದೆ. ಆದರೆ ಒಂದು ಬಾರಿ ಸ್ವಯಂ ಸೇವಕನಾದವನು ಸದಾ ಕಾಲ ಸ್ವಯಂ ಸೇವಕನಾಗಿರುತ್ತಾನೆ ಎಂದು ಸಂಘ ಪರಿವಾರದ ಹಿರಿಯರು ಹೇಳಿದ್ದಾರೆ. ಹೀಗಾಗಿ ಪ್ರತಿಪಕ್ಷಗಳ ಮುಖಂಡರು ಆಡಿರುವ ಮಾತು ಇಡೀ ಸಂಘಟನೆಗೆ ಸವಾಲಾಗಿದೆ. ಪೀಠದಲ್ಲಿದ್ದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿ ನಡೆದುಕೊಳ್ಳುವುದಿಲ್ಲ. ಅಧಿಕಾರ ದುರುಪಯೋಗ ಮಾಡಿಕೊಳ್ಳುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದರು.

ಆರ್‌ಎಸ್‌ಎಸ್‌ ಎಂದರೆ ಬ್ರಾಹ್ಮಣರ ಸಂಘಟನೆ, ಹಿಂದುಳಿದವರು, ದಲಿತರನ್ನು ಬಳಸಿಕೊಳ್ಳುತ್ತಾರೆ, ಸಮನಾಗಿ ಕಾಣುವುದಿಲ್ಲ ಎಂಬ ಮಾತು ಸುಳ್ಳು. ಆರ್‌ಎಸ್‌ಎಸ್‌ಗೆ ಹೋಗುತ್ತಿದ್ದ ನನ್ನ ಅಣ್ಣನನ್ನು ನನ್ನ ತಂದೆ ಮನೆಯಿಂದ ಹೊರಗೆ ಹಾಕಿದಾಗ ಅಣ್ಣ ಉಳಿದುಕೊಂಡಿದ್ದು ಬ್ರಾಹ್ಮಣರ ಮನೆಯಲ್ಲಿ. ಅವರ ಮನೆಯಲ್ಲಿ ಮಕ್ಕಳ ಜೊತೆ ಕುಳಿತು ಊಟ ಮಾಡಿದ್ದನ್ನು ನೋಡಿ ನನ್ನ ತಂದೆ ನಂತರ ನನಗೆ ಆರ್‌ಎಸ್‌ಎಸ್‌ಗೆ ಹೋಗಲು ಅನುಮತಿ ನೀಡಿದರೆಂದು ನೆನಪಿಸಿಕೊಂಡರು.