ಮುಂಬೈ : ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ಯುಪಿಎ ಪಾಲಿಗೆ ಮಹತ್ವದ ರಾಜ್ಯವೆಂದರೆ ಮಹಾರಾಷ್ಟ್ರ. 48 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರವು ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಯಾವುದೇ ಕೂಟಕ್ಕೆ ಪ್ರಮುಖ ಕೊಡುಗೆ ನೀಡಬಲ್ಲ ರಾಜ್ಯ. ಅದಕ್ಕೆಂದೇ ಈ ರಾಜ್ಯಕ್ಕೆ ಪಕ್ಷಗಳು ಇನ್ನಿಲ್ಲದ ಪ್ರಾಮುಖ್ಯತೆ ನೀಡುತ್ತವೆ. 

2014 ರ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ -ಬಿಜೆಪಿ- ಸ್ವಾಭಿಮಾನಿ ಶೇತ್ಕರಿ ಪಕ್ಷದ ಮೈತ್ರಿಕೂಟ ಇಲ್ಲಿ 42  ಕ್ಷೇತ್ರಗಳಲ್ಲಿ ಜಯಿಸಿದ್ದವು. ಈ ಮೂಲಕ ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬರುವಲ್ಲಿ ಈ ಸ್ಥಾನಗಳು ಪ್ರಮುಖ ಪಾತ್ರ ವಹಿಸಿದ್ದವು. ಆದರೆ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ಕೇವಲ 6 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡು ಹೀನಾಯ ಸೋಲು ಅನುಭವಿಸಿದ್ದವು. 

ಈ ಸಲ ಕೂಡ 2014 ಕ್ಕಿಂತ ಚಿತ್ರಣ ಹೆಚ್ಚು ಬದಲೇನೂ ಆಗಿಲ್ಲ. ಶಿವಸೇನೆ-ಬಿಜೆಪಿ ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಸೀಟು ಹಂಚಿಕೆ ಅಂತಿಮವಾಗಿದೆ. ಇನ್ನು ಎನ್‌ಸಿಪಿ-ಕಾಂಗ್ರೆಸ್ ಸೀಟು ಹಂಚಿಕೆ ಕೂಡ ಅಂತಿಮವಾಗಿದೆ. ಒಂದೇ ಒಂದು ವ್ಯತ್ಯಾಸವೆಂದರೆ, ಕಳೆದ ಸಲ ಈ ಕೂಟದ ಜತೆಗೆ ಇದ್ದ ಸ್ವಾಭಿಮಾನಿ ಶೇತ್ಕರಿ ಪಕ್ಷದ ರಾಜು ಶೆಟ್ಟಿ ಈ ಸಲ ಪ್ರತಿಪಕ್ಷದ ಪಾಳಯಕ್ಕೆ ಸೇರಿದ್ದಾರೆ.

2014ರಲ್ಲಿ ಏನಾಗಿತ್ತು?: 2014 ರ ಮೇ ಲೋಕಸಭೆ ಚುನಾ ವಣೆಯಲ್ಲಿ ಭರ್ಜರಿ ಮೋದಿ ಅಲೆ ಇತ್ತು. ಇದೇ ಅಲೆಯಲ್ಲಿ ಶಿವಸೇನೆ-ಬಿಜೆಪಿ-ಶೇತ್ಕರಿ ಪಕ್ಷದ ಮೈತ್ರಿಕೂಟ ಒಟ್ಟಾಗಿ ಸ್ಪರ್ಧಿಸಿದ್ದವು. ಬಿಜೆಪಿ 24 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 23 ರಲ್ಲಿ ಜಯ ಸಾಧಿಸಿದ್ದರೆ, ಶಿವಸೇನೆ 20ರಲ್ಲಿ ಸ್ಪರ್ಧಿಸಿ 18ರಲ್ಲಿ ಗೆದ್ದಿತ್ತು. ಇನ್ನು ಸ್ವಾಭಿಮಾನಿ ಶೇತ್ಕರಿ ಪಕ್ಷ 2ರಲ್ಲಿ ಸ್ಪರ್ಧಿಸಿ 1 ರಲ್ಲಿ ಜಯ ಸಾಧಿಸಿತ್ತು. ಅಂತೆಯೇ ಯುಪಿಎ ಕೂಟದಲ್ಲಿದ್ದ ಎನ್‌ಸಿಪಿ 21ರಲ್ಲಿ ಸ್ಪರ್ಧಿಸಿ 4 ರಲ್ಲಿ ಮಾತ್ರ ಜಯಿಸಿತ್ತು.

2009 ಕ್ಕೆ ಹೋಲಿಸಿದರೆ 4 ಸ್ಥಾನ ನಷ್ಟ ಮಾಡಿಕೊಂಡಿತ್ತು. ಕಾಂಗ್ರೆಸ್ ಪಕ್ಷ 26 ರಲ್ಲಿ ಕಣಕ್ಕಿಳಿದಿತ್ತು. ಆದರೆ, ಕೇವಲ 2ರಲ್ಲಿ ಜಯಿಸಿ, 16 ಸ್ಥಾನಗಳನ್ನು ನಷ್ಟ ಮಾಡಿಕೊಂಡಿತ್ತು. ನಂತರ ಬದಲಾದ ಪರಿಸ್ಥಿತಿಯಲ್ಲಿ 2014ರ ಅಕ್ಟೋಬರ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಆದರೆ ಅತಂತ್ರ ವಿಧಾನಸಭೆ ಸೃಷ್ಟಿಯಾದ ಕಾರಣ ಬಿಜೆಪಿಗೆ ಬೆಂಬಲ ಪ್ರಕಟಿಸಿತ್ತು. 

ಈಗಿನ ಚಿತ್ರಣ ಏನು?: ಇದೇ ವರ್ಷ ಮೇನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಎನ್‌ಡಿಎ ಹಾಗೂ ಯುಪಿಎ ನಡುವೆ ಹಣಾಹಣಿ ಸಿದ್ಧವಾಗಿದೆ. ಈವರೆಗೆ ಶಿವಸೇನೆಯು ಬಿಜೆಪಿ ಜತೆಗೆಇದ್ದರೂ, ತನಗೆ ಬಿಜೆಪಿ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಮುನಿಸಿಕೊಳ್ಳುತ್ತಿತ್ತು. ಖುದ್ದು ಪ್ರಧಾನಿ ನರೇಂದ್ರ ಮೋದಿಅವರ ಬಗ್ಗೆ ಶಿವಸೇನಾ ಮುಖ್ಯಸ್ಥ ಉದ್ಧವ ಠಾಕ್ರೆ ಅವರು ಟೀಕಾಪ್ರಹಾರ ಮಾಡುತ್ತಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರವನ್ನು ಬಿಜೆಪಿ ನಿರ್ಮಿಸಲಿಲ್ಲ ಎಂಬುದು ಠಾಕ್ರೆ ಅವರ ಕೋಪಗಳಲ್ಲಿ ಒಂದಾಗಿತ್ತು.

ಆದರೆ ಶಿವಸೇನೆಗೆ ಬೇರೆ ಆಯ್ಕೆಗಳು ಇರಲಿಲ್ಲ. ಹಿಂದುತ್ವವನ್ನು ಪ್ರಖರವಾಗಿ ಪ್ರಚುರಪಡಿಸುವ ಒಂದು ಪಕ್ಷವಾಗಿ ಕಾಂಗ್ರೆಸ್ ಪಕ್ಷದ ಜತೆಗೋ,  ಎನ್‌ಸಿಪಿ ಜತೆಗೋ ಹೋಗುವ ಅವಕಾಶವು ಶಿವಸೇನೆಗೆ ಇರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೊನೆಗೆ ‘ಹಿಂದೂ ಮತಗಳ ವಿಭಜನೆ ಆಗಬಾರದು’ ಎಂಬ ಉದ್ದೇಶದಿಂದ ಬಿಜೆಪಿ ಜತೆ ಮೈತ್ರಿ ಘೋಷಿಸಿಕೊಂಡಿದೆ. ಈ ಪ್ರಕಾರ ಬಿಜೆಪಿ 25 ರಲ್ಲಿ ಹಾಗೂ ಶಿವಸೇನೆ 23 ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. 

ದಲಿತ ನಾಯಕರಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಮದಾಸ ಅಠಾವಳೆ ಅವರ ಶ್ರೀರಕ್ಷೆಯೂ ಎನ್‌ಡಿಎಗೆ ಇದೆ. ಮುಖ್ಯವಾಗಿ ಬಿಜೆಪಿ-ಶಿವಸೇನೆಗಳು ಪ್ರಧಾನಿ ನರೇಂದ್ರ ಮೋದಿ ಅವರ 5 ವರ್ಷದ ಸಾಧನೆಗಳು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿವೆ. ಇನ್ನುಳಿದಂತೆ ಎನ್‌ಸಿಪಿ-ಕಾಂಗ್ರೆಸ್ ಸೀಟು ಹಂಚಿಕೆ ಕೂಡ ಅಂತಿಮವಾಗಿದೆ. ಆದರೆ ಯಾರು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಘೋಷಣೆ ಆಗಿಲ್ಲ.

ನರೇಂದ್ರ ಮೋದಿ ಅವರು 5 ವರ್ಷಗಳ ಆಳ್ವಿಕೆಯಲ್ಲಿ ವಿಫಲರಾಗಿದ್ದಾರೆ ಎಂಬುದನ್ನೇ ಚುನಾವಣಾ ವಿಷಯ ಮಾಡಿಕೊಳ್ಳಲು ಯುಪಿಎ ನಿರ್ಧರಿಸಿದೆ. ಇನ್ನುಳಿದಂತೆ ಮಹಾರಾಷ್ಟ್ರದಲ್ಲಿ ನಡೆದ ಭೀಮಾ-ಕೋರೇಗಾಂವ್ ಹಿಂಸಾಚಾರ ಹಾಗೂ ಅದರ ನಂತರ ನಡೆದ ಎಡಪಂಥೀಯ ನಾಯಕರ ಬಂಧನಗಳು, ಮರಾಠಾ ಮೀಸಲು ವಿಚಾರಗಳು ಚುನಾವಣೆಯಲ್ಲಿ ಪ್ರಮುಖವಾಗಿ ಪ್ರತಿಬಿಂಬಿತವಾಗುವ ಸಾಧ್ಯತೆ ಇದೆ.

ಈ ಕೂಟಗಳನ್ನು ಹೊರತುಪಡಿಸಿದರೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಪ್ರಮುಖ ಪಕ್ಷವಾಗಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಎಂಎನ್‌ಎಸ್ ಸ್ಪರ್ಧಿಸುವುದು ಅನುಮಾನ ಎಂದು ಹೇಳಲಾಗಿದೆ. ಎನ್‌ಸಿಪಿ ನಾಯಕ ಶರದ್ ಪವಾರ್ ಅವರಿಗೆ ಫೋನ್ ಮಾಡಿದ್ದ ರಾಜ್, ‘ನನಗೆ ಲೋಕಸಭೆ ಚುನಾವಣೆಯಲ್ಲಿ ಆಸಕ್ತಿ ಇಲ್ಲ. ನಮ್ಮದೇನಿದ್ದರೂ ವಿಧಾನಸಭೆ ಚುನಾವಣೆ. ಆದರೆ ಈ ಚುನಾವಣೆಯಲ್ಲಿ ಎನ್ ಸಿಪಿ-ಕಾಂಗ್ರೆಸ್ ಬೆಂಬಲಿಸುವ ಇರಾದೆ ಇದೆ’ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. ಇದು ಯುಪಿಎಗೆ ಕೆಲ ಮಟ್ಟಿಗೆ ನೆರವಾಗುವ ನಿರೀಕ್ಷೆಯಿದೆ. ಆದಾಗ್ಯೂ ರಾಜ್ ಠಾಕ್ರೆ ಅವರು ಉತ್ತರ ಭಾರತ ವಿರೋಧಿ ಮನೋಭಾವವಿದ್ದು, ಅವರ ಬೆಂಬಲ ಪಡೆದರೆ ಉತ್ತರ ಭಾರತೀಯರು ಮತ ಹಾಕದೇ ಹೋಗಬಹುದು ಎಂಬ ಅಳುಕು ಕಾಂಗ್ರೆಸ್‌ಗಿದೆ.