ಇದೇ ಶುಕ್ರವಾರದಂದು ಲಾಲೂ ಪ್ರಸಾದ್ ಯಾದವ್ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿತ್ತು. ಈ ವಿಚಾರದಲ್ಲಿ ಜೆಡಿಯು ಪಕ್ಷ ಮೌನ ವಹಿಸಿದ್ದು ಆರ್'ಜೆಡಿ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಕೇಂದ್ರ ಸರಕಾರದೊಂದಿಗೆ ನಿತೀಶ್ ಕುಮಾರ್ ಶಾಮೀಲಾಗಿ ತಮ್ಮ ವಿರುದ್ಧ ಪಿತೂರಿ ಮಾಡಿರಬಹುದೆಂಬುದು ಲಾಲೂ ಶಂಕೆ.
ಪಾಟ್ನಾ(ಜುಲೈ 10): ಸಿಎಂ ನಿತೀಶ್ ಕುಮಾರ್ ಮತ್ತು ಮಾಜಿ ಸಿಎಂ ಲಾಲೂ ಮಧ್ಯೆ ವಿರಸ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಹಾರದ ಮಹಾಘಟಬಂಧನದಲ್ಲಿ ಬಿರುಕು ದೊಡ್ಡದಾಗುತ್ತಿದೆ. ಮೈತ್ರಿಕೂಟವು ಯಾವಾಗ ಬೇಕಾದರೂ ಮುರಿದುಬಿದ್ದು ಸರಕಾರ ಪತನವಾಗುವ ಸಾಧ್ಯತೆ ಇದೆ. ನಿತೀಶ್ ಕುಮಾರ್'ಗೆ ನೀಡಿದ್ದ ಬೆಂಬಲವನ್ನು ಆರ್'ಜೆಡಿ ಹಿಂಪಡೆಯುವ ಸಂಭವವೂ ಇದೆ. ಈ ಹಿನ್ನೆಲೆಯಲ್ಲಿ ಬಿಹಾರದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿಯು ಮುಖ್ಯಮಂತ್ರಿಯ ನೆರವಿಗೆ ಮುಂದಾಗುವುದಾಗಿ ಹೇಳಿದೆ. ಜೆಡಿಯು ಪಕ್ಷವು ಮೈತ್ರಿಕೂಟದಿಂದ ಹೊರಬಂದರೆ ಅದಕ್ಕೆ ಬಿಜೆಪಿ ಹೊರಗಿನ ಬೆಂಬಲ ನೀಡುತ್ತದೆ ಎಂದು ಬಿಜೆಪಿ ಮುಖಂಡ ನಿತ್ಯಾನಂದ್ ರಾಯ್ ಹೇಳಿದ್ದಾರೆ.
ಇದೇ ಶುಕ್ರವಾರದಂದು ಲಾಲೂ ಪ್ರಸಾದ್ ಯಾದವ್ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿತ್ತು. ಈ ವಿಚಾರದಲ್ಲಿ ಜೆಡಿಯು ಪಕ್ಷ ಮೌನ ವಹಿಸಿದ್ದು ಆರ್'ಜೆಡಿ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಕೇಂದ್ರ ಸರಕಾರದೊಂದಿಗೆ ನಿತೀಶ್ ಕುಮಾರ್ ಶಾಮೀಲಾಗಿ ತಮ್ಮ ವಿರುದ್ಧ ಪಿತೂರಿ ಮಾಡಿರಬಹುದೆಂಬುದು ಲಾಲೂ ಶಂಕೆ. ಲಾಲೂ ಪುತ್ರ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಸಿಬಿಐ ಭ್ರಷ್ಟಾಚಾರದ ಆರೋಪ ಮಾಡಿದೆ. ತೇಜಸ್ವಿ ಯಾದವ್ ತಲೆದಂಡಕ್ಕೆ ಬಿಹಾರದಾದ್ಯಂತ ಒತ್ತಾಯ ಕೇಳಿಬರುತ್ತಿದೆ. ಆದರೆ, ಆರ್'ಜೆಡಿ ಪಕ್ಷವು ತೇಜಸ್ವಿಯವರನ್ನು ಕೆಳಗಿಳಿಸಲು ಸುತಾರಾಂ ಒಪ್ಪುತ್ತಿಲ್ಲ. ಇಂದು ಲಾಲೂ ಯಾದವ್ ಅವರು ತಮ್ಮ ಪಕ್ಷದ ಶಾಸಕರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.
ನಾಳೆ, ಮಂಗಳವಾರದಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭ್ರಷ್ಟಾಚಾರ ಪ್ರಕರಣ ಮತ್ತು ಸಿಬಿಐ ದಾಳಿ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ, ನಿತೀಶ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು. ಇದರೊಂದಿಗೆ ಸರಕಾರ ಪತನವಾಗುವ ಸಾಧ್ಯತೆ ಇದೆ.
ಇನ್ನು, ನಿತೀಶ್ ಮತ್ತು ಬಿಜೆಪಿ ನಡುವಿನ ಮಿತ್ರತ್ವ ಇಂದು ನಿನ್ನೆಯದಲ್ಲ. ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗುವ ಮುಂಚೆ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ ಅಧಿಕಾರ ರಚಿಸಿತ್ತು. ಮೋದಿ ಬಗೆಗಿನ ವಿರೋಧದಿಂದಾಗಿ ನಿತೀಶ್ ಅವರು ಬಿಜೆಪಿಯ ಸಖ್ಯವನ್ನೇ ಮುರಿದುಕೊಂಡಿದ್ದರು. ಆ ಬಳಿಕವಷ್ಟೇ ಅವರು ಬಿಹಾರ ಚುನಾವಣೆ ಬಳಿಕ ಆರ್'ಜೆಡಿ, ಕಾಂಗ್ರೆಸ್ ಪಕ್ಷಗಳೊಂದಿಗೆ ಕೈಜೋಡಿಸಿ ಮಹಾಮೈತ್ರಿಕೂಟ ರಚಿಸಿ ಸಿಎಂ ಆದರು.
