Asianet Suvarna News Asianet Suvarna News

ಮಾ.3ರಿಂದ ಕರಾವಳಿಯಲ್ಲಿ ಬಿಜೆಪಿ ‘ಸುರಕ್ಷಾ ಯಾತ್ರೆ’

ರಾಜ್ಯದ ಕರಾವಳಿ ಭಾಗದಲ್ಲಿ ಶಾಂತಿ ಸುರಕ್ಷತೆಯ ಭಾವನೆ ಪ್ರತಿಪಾದಿಸುವ ಉದ್ದೇಶದಿಂದ ಬಿಜೆಪಿಯು ಬರುವ ಮಾ.3ರಿಂದ 6ರವರೆಗೆ ನಾಲ್ಕು ದಿನಗಳ ‘ಕರ್ನಾಟಕ ಸುರಕ್ಷಾ ಯಾತ್ರೆ’ ಹಮ್ಮಿಕೊಂಡಿದೆ.

BJP Rally In Coastal From March 3

ಬೆಂಗಳೂರು : ರಾಜ್ಯದ ಕರಾವಳಿ ಭಾಗದಲ್ಲಿ ಶಾಂತಿ ಸುರಕ್ಷತೆಯ ಭಾವನೆ ಪ್ರತಿಪಾದಿಸುವ ಉದ್ದೇಶದಿಂದ ಬಿಜೆಪಿಯು ಬರುವ ಮಾ.3ರಿಂದ 6ರವರೆಗೆ ನಾಲ್ಕು ದಿನಗಳ ‘ಕರ್ನಾಟಕ ಸುರಕ್ಷಾ ಯಾತ್ರೆ’ ಹಮ್ಮಿಕೊಂಡಿದೆ.

ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಿಂದ ಎರಡು ಪ್ರತ್ಯೇಕ ಯಾತ್ರೆಗಳು 3ರಂದು ಏಕಕಾಲದಲ್ಲಿ ಆರಂಭಗೊಂಡು 6ರಂದು ಸುರತ್ಕಲ್‌ನಲ್ಲಿ ಸಮಾಪನಗೊಳ್ಳಲಿವೆ. ಅಲ್ಲಿ ನಡೆಯುವ ಸಮಾರೋಪ ಸಮಾರಂಭದ ಸಮಾವೇಶದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಈ ಕುರಿತು ವಿವರ ನೀಡಿದರು.

ಆಯಾ ಲೋಕಸಭಾ ಸದಸ್ಯರ ನೇತೃತ್ವದಲ್ಲಿ ನಡೆಯುವ ಈ ಯಾತ್ರೆಯಲ್ಲಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ನಗರ ಪ್ರದೇಶಗಳಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದು, ಇತರೆಡೆ ವಾಹನದ ಮೂಲಕ ಯಾತ್ರೆ ಮುಂದುವರೆಸಲಾಗುತ್ತದೆ. ಕುಶಾಲನಗರದಲ್ಲಿ ಆರಂಭವಾಗುವ ಯಾತ್ರೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಚಾಲನೆ ನೀಡಲಿದ್ದಾರೆ. ಅಂಕೋಲಾದಲ್ಲಿ ಆರಂಭವಾಗುವ ಯಾತ್ರೆಗೆ ಕೇಂದ್ರ ಸಚಿವರಾದ ಅನಂತಕುಮಾರ್‌ ಮತ್ತು ಅನಂತಕುಮಾರ್‌ ಹೆಗಡೆ ಅವರು ಚಾಲನೆ ಕೊಡಲಿದ್ದಾರೆ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇದು ಸಂಘರ್ಷದ ಯಾತ್ರೆ ಅಲ್ಲ. ಯಾರ ಪರ ಅಥವಾ ವಿರುದ್ಧವೂ ಅಲ್ಲ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳು ಮತ್ತು ಗಲಭೆಗಳಿಂದ ಅಲ್ಲಿನ ಜನಸಾಮಾನ್ಯರು ಅದರಲ್ಲೂ ಯುವಜನತೆ ಭಯಭೀತರಾಗಿದ್ದಾರೆ. ಹೀಗಾಗಿ, ಅಲ್ಲಿನ ಜನರಿಗೆ ಸುರಕ್ಷತೆಯ ಭಾವನೆ ಮೂಡಿಸುವ ಉದ್ದೇಶದಿಂದ ಈ ಕರ್ನಾಟಕ ಸುರಕ್ಷಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕುಶಾಲನಗರದಿಂದ ಆರಂಭವಾಗುವ ಯಾತ್ರೆಯು ಮಡಿಕೇರಿ, ಸುಳ್ಯ, ಪುತ್ತೂರು, ಕಲ್ಲಡ್ಕ, ಬಿ.ಸಿ.ರೋಡ್‌, ಮಂಗಳೂರು ಮೂಲಕ ಸುರತ್ಕಲ್‌ ತಲುಪಲಿದೆ. ಅದೇ ರೀತಿ ಅಂಕೋಲಾದಿಂದ ಆರಂಭವಾಗುವ ಯಾತ್ರೆಯು ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಕಾಪು, ಮೂಲ್ಕಿ ಮೂಲಕ ಸುರತ್ಕಲ್‌ ತಲುಪಲಿದೆ. ಯಾತ್ರೆ ಹಾದು ಹೋಗುವ ವೇಳೆ ನಗರ ಪ್ರದೇಶಗಳಲ್ಲಿ ಸಮಾವೇಶಗಳನ್ನು ನಡೆಸಲಾಗುವುದು ಎಂದು ಶೋಭಾ ವಿವರ ನೀಡಿದರು. ಪಕ್ಷದ ಮುಖಂಡರಾದ ಎನ್‌.ರವಿಕುಮಾರ್‌, ಡಾ.ವಾಮನ ಆಚಾರ್ಯ, ಅನ್ವರ್‌ ಮಾಣಿಪ್ಪಾಡಿ, ಎಸ್‌.ಪ್ರಕಾಶ್‌ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.

Follow Us:
Download App:
  • android
  • ios