ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿರುವ ಸಚಿವ ರಾದ ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿ ಹೊಳಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಶುಕ್ರವಾರ ವಿಧಾನಸೌಧ ಮುತ್ತಿಗೆ ಕಾರ್ಯ ಕ್ರಮ ಹಮ್ಮಿಕೊಂಡಿದೆ.
ಬೆಂಗಳೂರು(ಆ.18): ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿರುವ ಸಚಿವ ರಾದ ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿ ಹೊಳಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಶುಕ್ರವಾರ ವಿಧಾನಸೌಧ ಮುತ್ತಿಗೆ ಕಾರ್ಯ ಕ್ರಮ ಹಮ್ಮಿಕೊಂಡಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಈ ಮುತ್ತಿಗೆ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಮುಖಂಡರೂ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬೆಳಗ್ಗೆ ೧೧ಗಂಟೆಗೆ ನಗರದ ಫ್ರೀಡಂ ಪಾರ್ಕ್ ಬಳಿ ಎಲ್ಲ ಮುಖಂಡರು ಹಾಗೂ ಕಾರ್ಯ ಕರ್ತರು ಸೇರಿದ ನಂತರ ಅಲ್ಲಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳಲಿದ್ದಾರೆ.
ಬಿಜೆಪಿ ಅ‘್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಈ ಹೋರಾಟ ನಡೆಯುತ್ತಿದ್ದು, ಶುಕ್ರವಾರದಿಂದ 1 ವಾರ ಕಾಲ ರಾಜ್ಯಾದ್ಯಂತ ವಿವಿಧೆಡೆ ಪ್ರತಿಭಟನಾ ಕಾರ್ಯ ಕ್ರಮಗಳು ನಡೆಯಲಿವೆ. ಇತ್ತೀಚೆಗೆ ಶಿವಕುಮಾರ್ ಮತ್ತವರ ಆಪ್ತರಿಗೆ ಸೇರಿದ ಮನೆ-ಕಚೇರಿಗಳ ಮೇಲೆ ನಾಲ್ಕು ದಿನಗಳ ಕಾಲ ಆದಾಯ ತೆರಿಗೆ ಇಲಾಖೆ ವ್ಯಾಪಕ ದಾಳಿ ನಡೆಸಿತ್ತು. ಈ ವೇಳೆ ಅಪಾರ ಪ್ರಮಾಣದ ನಗದು ಮತ್ತು ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿದ್ದವು ಎನ್ನಲಾಗಿದೆ.
ಆದರೆ, ಈ ಐಟಿ ದಾಳಿ ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ನಾಯಕರು ಯಾವುದೇ ರೀತಿಯ ಹೋರಾಟ ನಡೆಸಲಿಲ್ಲ. ಸರ್ಕಾರದ ವಿರುದ್ಧ ಗಟ್ಟಿಯಾಗಿ ಹೇಳಿಕೆಯನ್ನೂ ನೀಡಲಿಲ್ಲ. ಖುದ್ದು ಯಡಿಯೂರಪ್ಪ ಅವರೇ, ‘ಡಿ.ಕೆ.ಶಿವಕುಮಾರ್ ಅವರಿಗೆ ಐಟಿ ದಾಳಿಗೆ ಉತ್ತರ ನೀಡುವ ಶಕ್ತಿಯಿದೆ’ ಎಂಬ ಹೇಳಿಕೆ ನೀಡುವ ಮೂಲಕ ಮೃದು ಧೋರಣೆ ವ್ಯಕ್ತಪಡಿಸಿದ್ದು ಪಕ್ಷದಲ್ಲಿ ಅಸಮಾಧಾನ ಉಂಟು ಮಾಡಿತ್ತು.
ಶಿವಕುಮಾರ್ ಅವರು ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರು ಹಾಗೂ ಸಚಿವರಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಪ್ರಬಲ ಹೋರಾಟ ನಡೆಸುವ ಮೂಲಕ ಇಕ್ಕಟ್ಟಿಗೆ ಸಿಲುಕಿಸುವ ಅವಕಾಶ ಕೈಬಿಟ್ಟಿರಲ್ಲ ಎಂದು ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಅವರು ರಾಜ್ಯ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
