ಕರಾವಳಿ ಪ್ರದೇಶದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಖಂಡಿಸಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿಯು ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಲ್ಲದೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು.

ಬೆಂಗಳೂರು (ಜು.12): ಕರಾವಳಿ ಪ್ರದೇಶದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಖಂಡಿಸಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿಯು ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಲ್ಲದೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು.
ಬುಧವಾರ ನಗರದ ಆನಂದರಾವ್ ವೃತ್ತದ ಬಳಿಯ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರ ವಿರುದ್ಧ ಟೀಕಾ ಪ್ರಹಾರ ನಡೆಸುವ ಭರದಲ್ಲಿ ಬಿಜೆಪಿ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನ ಪ್ರಯೋಗಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ವಾಚಾಮಗೋಚರವಾಗಿ ನಿಂದಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಧಿಕಾರಿಗಳು ಪುರುಷತ್ವ ಇಲ್ಲದವರು... ಕಾಂಗ್ರೆಸ್ ನಾಯಕರು ಹಿಂದೂ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದು, ಅವರಿಗೆ ...ನಲ್ಲಿ ಹೊಡೆಯಬೇಕು...ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯಗೆ ಯೋಗ್ಯತೆ ಇಲ್ಲ...ಅದ್ಯಾವುದೋ ಹುಂಡಿ ಇದೆಯಲ್ಲಾ ಆ ಹುಂಡಿಗೆ ಹೋಗಿ ಬೀಳು ಎಂಬಿತ್ಯಾದಿ ಹೇಳಿಕೆಗಳು ಬಿಜೆಪಿ ಮುಖಂಡರಿಂದ ಹೊರಬಿದ್ದವು.
ಶಾಸಕ ಬಿ.ಎನ್.ವಿಜಯಕುಮಾರ್ ಮಾತನಾಡಿ, ಕರಾವಳಿ ಭಾಗದಲ್ಲಿ ಅಶಾಂತಿ ತಲೆದೋರಿದ್ದರೂ ನಾವು ಸುಮ್ಮನಿರಲು ಪುರುಷತ್ವ ಇಲ್ಲದವರೇ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಮುಖ್ಯಮಂತ್ರಿಗಳು ಯಾರು ಪುರುಷತ್ವ ಇಲ್ಲದವರು ಎಂಬುದು ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ನಾನು ಹೇಳುತ್ತೇನೆ ಮುಖ್ಯಮಂತ್ರಿ ಮತ್ತು ಪೊಲೀಸ್ ಅಧಿಕಾರಿಗಳು ಪುರುಷತ್ವ ಇಲ್ಲದವರು ಎಂದು ಏಕವಚನದಲ್ಲಿ ಟೀಕಿಸಿದರು.
ದೇಶದಲ್ಲಿ ಶೇ.೮೪ರಷ್ಟು ಹಿಂದೂಗಳಿದ್ದು, ಶೇ.೧೬ರಷ್ಟು ಇತರ ಸಮುದಾಯದವರಿದ್ದಾರೆ. ಕಾಂಗ್ರೆಸ್ ನಾಯಕರು ಹಿಂದೂ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದು, ಅವರಿಗೆ ಮೆಟ್ಟಿನಲ್ಲಿ ಹೊಡೆಯಬೇಕು. ಹಿಂದೂಗಳ ಮೇಲೆ ಸರ್ಕಾರಕ್ಕೆ ದ್ವೇಷ ಇದೆ. ಹೀಗಾಗಿ ಇಂತಹ ಕೆಲಸಕ್ಕೆ ಕೈ ಹಾಕಿದ್ದಾರೆ. ಆರ್‌ಎಸ್‌ಎಲ್ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಬೇಕು ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ. ಅವರನ್ನು ಬಂಧಿಸಲು ಇವರು ಯಾರು? ಮಂಗಳೂರಲ್ಲಿ ಸಚಿವ ರಮಾನಾಥ ರೈ ಬಾಯಿ ಮುಚ್ಚಿಕೊಂಡು ಇದ್ದರೆ ಗಲಭೆ ನಿಲ್ಲುತ್ತದೆ. ಪ್ರತಿಯೊಂದನ್ನು ಪ್ರಭಾಕರ್ ಭಟ್ ಕಡೆ ಬೊಟ್ಟು ಮಾಡಲಾಗುತ್ತದೆ. ಅವರ ಜ್ಞಾನ, ವಿಚಾರಗಳು ಇವರಿಗೆ ಗೊತ್ತಿದೆಯೇ? ಇವರೆಲ್ಲಾ ಆಯೋಗ್ಯರು ಎಂದು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದರು.

ಹುಂಡಿಗೆ ಹೋಗಿ ಬೀಳು- ಅಶೋಕ್:
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯಗೆ ಯೋಗ್ಯತೆ ಇಲ್ಲ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸಿದರೆ ನೀನು ಯಾಕೆ ಇದ್ದೀಯಾ ಮಾರಾಯಾ? ಅದ್ಯಾವುದೋ ಹುಂಡಿ ಇದೆಯಲ್ಲಾ ಆ ಹುಂಡಿಗೆ ಹೋಗಿ ಬೀಳು ಎಂದು ನಿಂದಿಸಿದರು.
ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಕೈ ಮಾಡಲಾಗುತ್ತಿದೆ. ಎಲ್ಲದ್ದಕ್ಕೂ ಕೇಂದ್ರದ ಕಡೆ ಬೊಟ್ಟು ಮಾಡುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇರೋದು ಏತಕ್ಕಾಗಿ? ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಆಡಳಿತ ನಡೆಸಲು ಯೋಗ್ಯತೆ ಇಲ್ಲದಿದ್ದರೆ ಸಿದ್ದರಾಮಯ್ಯನ ಹುಂಡಿಗೆ ಹೋಗಿ ಬೀಳು ಆಕ್ರೋಶ ವ್ಯಕ್ತಪಡಿಸಿದರು.
ಶರತ್ ಹತ್ಯೆಯಾಗಿ ವಾರವಾದರೂ ಆರೋಪಿಗಳ ಬಂಧನವಾಗಿಲ್ಲ. ಪೊಲೀಸರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡದೆ ಸರ್ಕಾರವು ಒಂದು ಕೋಮಿನ ಪರವಾಗಿ ಕೆಲಸ ಮಾಡುತ್ತಿದೆ. ಮುಸ್ಲಿಂರನ್ನು ಓಲೈಸುವ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ೨೪ಕ್ಕೂ ಹೆಚ್ಚು ಆರ್‌ಎಸ್‌ಎಸ್ ಕಾರ್ಯಕರ್ತರ ಕೊಲೆ ನಡೆದಿವೆ. ಬಿಜೆಪಿಯವರೇ ನಿಮಗೆ ಗುರಿಯಾಗಿದ್ದು, ಕಾಂಗ್ರೆಸ್‌ನವರು ಸಿಗುತ್ತಿಲ್ಲವೇ? ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಇಲಾಖೆ ಸತ್ತು ಹೋಗಿದೆಯೇ ಎಂದು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದ ವೇಳೆ ಒಬ್ಬ ಕಾಂಗ್ರೆಸ್ ಕಾರ್ಯಕರ್ತರನ ಹತ್ಯೆಯಾಗಿಲ್ಲ. ನಾನು ಗೃಹ ಸಚಿವನಾಗಿದ್ದ ವೇಳೆ ಅಯೋಧ್ಯೆ ತೀರ್ಪು ಹೊರಬಂದಿತ್ತು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಒಂದೇ ಒಂದು ಕೋಮುಗಲಭೆಗೆ ಅವಕಾಶ ಮಾಡಿಕೊಡಲಿಲ್ಲ. ಬಿಜೆಪಿಯನ್ನು ಕೋಮುವಾದಿ ಎನ್ನುವ ಸಿದ್ದರಾಮಯ್ಯ ಅವರು ನಿಜವಾದ ಕೋಮುವಾದಿ. ರಾಜ್ಯದಲ್ಲಿ ಶಾಂತಿ ಕಾಪಾಡಲು ಸಾಧ್ಯವಾಗದ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಲು ಯೋಗ್ಯತೆ ಇಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಸಚಿವರಾದ ರಮಾನಾಥ್ ರೈ ಮತ್ತು ಯು.ಟಿ.ಖಾದರ್ ಅವರನ್ನು ಗಡಿಪಾರು ಮಾಡಿದಾಗಲೇ ಕರಾವಳಿ ಭಾಗದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ. ಹೀಗಾಗಿ ಅವರನ್ನು ಗಡಿಪಾರು ಮಾಡಬೇಕು. ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹತ್ಯೆಗಳಿಗೆ ಕಾಂಗ್ರೆಸ್ ನೇರ ಕಾರಣ. ಕೆಎಫ್‌ಡಿ ಮತ್ತು ಪಾಪುಲರ್ ಫ್ರಂಟ್ ಸಂಘಟನೆಯವರು ದೇಶದ್ರೋಹಿಗಳಾಗಿದ್ದು, ಅವರಿಂದಲೇ ಕೊಲೆಗಳು ನಡೆಯುತ್ತಿದ್ದು, ಕೊಲೆಗಡುಕರಿಗೆ ಠಾಣೆಗಳಲ್ಲಿ ರಾಜ್ಯಾಥಿತ್ಯ ನೀಡಲಾಗುತ್ತಿದೆ ಎಂದು ದೂರಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪೊಲೀಸ್ ಇಲಾಖೆಯನ್ನು ಸರ್ಕಾರ ಬಲಗೊಳಿಸಿ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕಿತ್ತು. ಆದರೆ, ಮುಖ್ಯಮಂತ್ರಿಗಳು ಅಂತಹ ಕೆಲಸ ಮಾಡದೆ ಅವರಿಗೆ ಅವಮಾನ ಮಾಡಿದ್ದಾರೆ. ಮಂಗಳೂರು ಗಲಭೆ ನಿಯಂತ್ರಿಸಲು ಸಾಧ್ಯವಾಗಿಲ್ಲ. ಅಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದಂತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ೨೪ ಕಾರ್ಯಕರ್ತರ ಹತ್ಯೆಗಳಾಗಿವೆ. ಈ ಪೈಕಿ ಒಂದು ಪ್ರಕರಣ ಮಾತ್ರ ಎನ್‌ಐಎಗೆ ವಹಿಸಲಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಬಂಧಿಸಿದ್ದ ಗೂಂಡಾಗಳನ್ನು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿ ರಸ್ತೆಗೆ ಬಿಟ್ಟು ಕೊಲೆಗಳನ್ನು ಮಾಡುವಂತೆ ಮಾಡಿದ್ದಾರೆ ಎಂದು ತಿಳಿಸಿದರು.