ನವದೆಹಲಿ[ಮಾ.06]: ಪಾಕಿಸ್ತಾನದ ಬಾಲಾಕೋಟ್‌ ಜೈಷ್‌-ಎ-ಮೊಹಮ್ಮದ್‌ ಉಗ್ರ ಶಿಬಿರದ ಮೇಲಿನ ಭಾರತೀಯ ವಾಯುಪಡೆ ದಾಳಿ ಪರಿಣಾಮ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ 41 ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಲಿದೆ ಎಂದು ಇಂಡಿಯಾ ಟೀವಿ-ಸಿಎನ್‌ಎಕ್ಸ್‌ ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ.

ಪುಲ್ವಾಮಾ ದಾಳಿಗೂ ಮುನ್ನ ನಡೆದ ಸಮೀಕ್ಷೆಯಲ್ಲಿ ಬಿಎಸ್‌ಪಿ ಹಾಗೂ ಎಸ್‌ಪಿ ಮೈತ್ರಿಯು 49 ಲೋಕಸಭಾ ಸೀಟುಗಳನ್ನು ಜಯಿಸಲಿದೆ. ಈ ಅವಧಿಯಲ್ಲಿ ಬಿಜೆಪಿ ಕೇವಲ 29 ಕ್ಷೇತ್ರಗಳಲ್ಲಿ ಮಾತ್ರವೇ ಗೆಲುವು ಗಳಿಸಲಿದೆ ಎಂದು ಹೇಳಿತ್ತು. ಆದರೆ, ವೈಮಾನಿಕ ದಾಳಿ ಪರಿಣಾಮ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಹೆಚ್ಚುವರಿಯಾಗಿ 12 ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ. ಇದೇ ಅವಧಿಯಲ್ಲಿ ಎಸ್‌ಪಿ-ಬಿಎಸ್‌ಪಿ 14 ಸೀಟುಗಳನ್ನು ಕಳೆದುಕೊಳ್ಳಲಿವೆ. ಅಲ್ಲದೆ, ರಾಜ್ಯದಲ್ಲಿ ಏಕಾಂಗಿ ಸ್ಪರ್ಧೆ ಮಾಡುತ್ತಿರುವ ಕಾಂಗ್ರೆಸ್‌ ರಾಯ್‌ಬರೇಲಿ ಹಾಗೂ ಅಮೇಠಿ ಜೊತೆಗೆ ಮತ್ತೆರಡು ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆಲ್ಲಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 71 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆದರೆ, ಈ ಬಾರಿ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಮುಖಭಂಗ ಮಾಡಬೇಕೆಂಬ ಕಾರಣಕ್ಕೆ ಅಖಿಲೇಶ್‌ ನೇತೃತ್ವದ ಎಸ್‌ಪಿ, ಮಾಯಾವತಿ ಅವರ ಬಿಎಸ್‌ಪಿ ಹಾಗೂ ಅಜಿತ್‌ ಸಿಂಗ್‌ ಅವರ ಆರ್‌ಎಲ್‌ಡಿ ಮಹಾ ಮೈತ್ರಿ ಮಾಡಿಕೊಂಡಿವೆ. ಆದಾಗ್ಯೂ, ಈ ಮಹಾಮೈತ್ರಿ ಪಕ್ಷಗಳ ಕೇವಲ 35 ಕ್ಷೇತ್ರಗಳಲ್ಲಿ ಮಾತ್ರ ಅಸ್ತಿತ್ವ ಕಂಡುಕೊಳ್ಳಲಿವೆ ಎಂದು ತನ್ನ ಸಮೀಕ್ಷೆಯಲ್ಲಿ ಇಂಡಿಯಾ ಟೀವಿ-ಸಿಎನ್‌ಎಕ್ಸ್‌ ತಿಳಿಸಿದೆ.