ಇಂದು ಬಿಜೆಪಿ ಸಂಪರ್ಕ ಅಭಿಯಾನ

First Published 6, Apr 2018, 7:24 AM IST
BJP Programe Today
Highlights

ಬಿಜೆಪಿ ಸಂಸ್ಥಾಪನಾ ದಿನ ಪ್ರಯುಕ್ತ ಪ್ರತಿವರ್ಷದಂತೆ ಈ ಬಾರಿಯೂ ರಾಜ್ಯದಲ್ಲಿ ಶುಕ್ರವಾರ ಬೂತ್‌ ಮಟ್ಟದ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಹೇಳಿದ್ದಾರೆ.

ಬೆಂಗಳೂರು : ಬಿಜೆಪಿ ಸಂಸ್ಥಾಪನಾ ದಿನ ಪ್ರಯುಕ್ತ ಪ್ರತಿವರ್ಷದಂತೆ ಈ ಬಾರಿಯೂ ರಾಜ್ಯದಲ್ಲಿ ಶುಕ್ರವಾರ ಬೂತ್‌ ಮಟ್ಟದ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಹೇಳಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶುಕ್ರವಾರ ಬಿಜೆಪಿ ಸ್ಥಾಪನಾ ದಿನವಾಗಿದೆ. ಇದರ ಪ್ರಯುಕ್ತ ಸಂಪರ್ಕ ಅಭಿಯಾನವನ್ನು ಆಯೋಜಿಸಲಾಗಿದೆ. ಕನಿಷ್ಠ 6 ಲಕ್ಷ ಕಾರ್ಯಕರ್ತರು ಮತ್ತು ಮುಖಂಡರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ 56 ಸಾವಿರ ಬೂತ್‌ ಸಮಿತಿಗಳನ್ನು ರಚಿಸಲಾಗಿದೆ. ಬೂತ್‌ ಸಮಿತಿ ಅಧ್ಯಕ್ಷರು ಪಕ್ಷದ ಧ್ವಜ ಹಾರಿಸಲಿದ್ದಾರೆ. ಇಡೀ ದಿನ ಬಿಜೆಪಿಯ ಎಲ್ಲ ಹಂತದ ಮುಖಂಡರು ಮನೆ ಮನೆಗೆ ತೆರಳಲಿದ್ದಾರೆ. ಬೂತ್‌ ಸಮಿತಿ ಅಧ್ಯಕ್ಷರು ಪಕ್ಷದ ಧ್ವಜಾರೋಹಣ ಮಾಡಿ ನಂತರ ಚುನಾವಣಾ ಪ್ರಚಾರ ತಂತ್ರ ಸಭೆ ಮಾಡಲಿದ್ದಾರೆ ಎಂದು ತಿಳಿಸಿದರು.

ಈ ತಿಂಗಳ 8, 9 ಮತ್ತು 10ರಂದು 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಜೆಪಿ ನಾಯಕರ ಸಂಕಲ್ಪ ಅಭಿಯಾನ ಮತ್ತು ಮುಷ್ಟಿಧ್ಯಾನ ಅಭಿಯಾನದಲ್ಲಿ ಹಳ್ಳಿಗಳಲ್ಲಿ ಸಂಗ್ರಹಿಸಲಾದ ಧಾನ್ಯವನ್ನು ಅಡುಗೆ ಮಾಡಿ ಸಾಮೂಹಿಕವಾಗಿ ಭೋಜನ ಸ್ವೀಕರಿಸುವ ಕಾರ್ಯಕ್ರಮ ನಡೆಯಲಿದೆ. 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯ ಗ್ರಾಮಗಳಲ್ಲಿ ಈ ಕಾರ್ಯಕ್ರಮನಡೆಯಲಿದೆ. ಪಕ್ಷದ ಹಿರಿಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ರೈತ ಸ್ನೇಹಿ, ಸಮೃದ್ಧ ಮತ್ತು ರೈತರ ಆತ್ಮಹತ್ಯೆ ಮುಕ್ತ ರಾಜ್ಯ ಸಂಕಲ್ಪ ಮಾಡಲಾಗುವುದು.

ನಂತರ 11, 12, 13 ರಂದು 5 ಸಾವಿರಕೂ ಹೆಚ್ಚು ಜನಸಂಖ್ಯೆಯ ಊರುಗಳಲ್ಲಿ ಕರುನಾಡು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾಂಗ್ರೆಸ್‌ ಮುಕ್ತ ಕರ್ನಾಟಕ ಮತ್ತು ಭ್ರಷ್ಟಕಾಂಗ್ರೆಸ್‌ ಕಿತ್ತೊಗೆಯಲು ಬಿಜೆಪಿ ಸಿದ್ಧವಾಗಿದೆ ಎಂಬ ಅಂಶಗಳ ಬಗ್ಗೆ 300ಕ್ಕೂ ಹೆಚ್ಚು ಪಕ್ಷದ ನಾಯಕರು ಜಾಗೃತಿ ಮೂಡಿಸಲಿದ್ದಾರೆ ಎಂದು ವಿವರಿಸಿದರು.

ಕಾಂಗ್ರೆಸ್‌ ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಅಧಿಕಾರಕ್ಕಾಗಿ ಓಟ್‌ ಬ್ಯಾಂಕ್‌ ರಾಜಕೀಯ ಮಾಡುತ್ತಾ ಸಮಾಜವನ್ನು ಗುರಿಯಾಗಿಸಿಕೊಂಡು ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದು ಇದೇ ವೇಳೆ ರಾವ್‌ ಟೀಕಿಸಿದರು.

loader