Asianet Suvarna News Asianet Suvarna News

’25 ಎಂಪಿ ಸ್ಥಾನ ಗೆದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ’

25 ಎಂಪಿ ಸ್ಥಾನ ಗೆಲ್ಲಿಸಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ |  ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್‌ ಶಾ ‘ಹೊಸ ಭರವಸೆ’ |  ಶಾಸಕರು, ಸಂಸದರು, ಕಾರ್ಯಕರ್ತರ ಜತೆ ಮಾತುಕತೆ
 

BJP president Amit Shah says BJP will come to power in Karnataka
Author
Bengaluru, First Published Feb 22, 2019, 12:33 PM IST

ಬೆಂಗಳೂರು (ಫೆ. 22):  ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆಗೆ ಸತತ ಪ್ರಯತ್ನ ನಡೆಸಿ ಸದ್ಯ ತಣ್ಣಗಾಗಿರುವ ಪಕ್ಷದ ರಾಜ್ಯ ಮುಖಂಡರಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಮತ್ತೊಮ್ಮೆ ಅಧಿಕಾರದ ಆಸೆ ಚಿಗುರಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ 25 ಸ್ಥಾನ ಗೆಲ್ಲಿಸಿಕೊಡಿ. ನಂತರ ಕರ್ನಾಟಕದಲ್ಲಿ ನಮ್ಮದೇ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಶಾ ಮಾರ್ಮಿಕವಾಗಿ ಹೇಳಿದ್ದಾರೆ.

ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ದೋಸ್ತಿಯೇ ಉಳಿಯುವುದಿಲ್ಲ. ಜನಾದೇಶ ಅವರ ವಿರುದ್ಧವಾಗಿರುತ್ತದೆ. ಆಗ ಪರ್ಯಾಯವಾಗಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ತಾನೇ ತಾನಾಗಿಯೇ ಹಾದಿ ಸುಗಮವಾಗುತ್ತದೆ ಎಂದು ಅವರು ತಮ್ಮ ಮಾತಿಗೆ ಸಮರ್ಥನೆ ನೀಡಿದರು ಎಂದು ತಿಳಿದು ಬಂದಿದೆ.

ಮಿತ್ರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜಂಟಿಯಾಗಿ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸುವುದರಿಂದ ಬಿಜೆಪಿಗೆ ಯಾವುದೇ ರೀತಿಯ ನಷ್ಟಉಂಟಾಗುವುದಿಲ್ಲ. ಬದಲಾಗಿ, ಲಾಭವೇ ಆಗಲಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನ ಒರೆಗೆ ಹಚ್ಚಿ ನೋಡಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು ಎನ್ನಲಾಗಿದೆ.

ಇದೇ ವೇಳೆ ಅಮಿತ್‌ ಶಾ ಅವರು ಪಕ್ಷದ ಮುಖಂಡರಿಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನರನ್ನು ತಲುಪಲು ಮತ್ತು ಅವರ ಮನಸೆಳೆಯಲು ಅನುಸರಿಸಬೇಕಾದ ಮಾರ್ಗೋಪಾಯಗಳನ್ನು ಸೂಚಿಸಿದರು.

ಆಕಸ್ಮಿಕವಾಗಿ ಬರುವ ಚುನಾವಣೆಯಲ್ಲಿ ಹಲವು ಪಕ್ಷಗಳನ್ನು ಒಳಗೊಂಡ ಮಹಾಗಠಬಂಧನ್‌ ಅಧಿಕಾರಕ್ಕೆ ಬಂದರೆ ಯಾರು ಪ್ರಧಾನಿಯಾಗಬಹುದು? ಯಾರು ರಕ್ಷಣಾ ಸಚಿವರಾಗಬಹುದು? ಯಾರು ಗೃಹ ಸಚಿವರಾಗಬಹುದು? ಎಂಥ ಸುಂದರ ಆಡಳಿತವನ್ನು ಅವರು ಕೊಡಬಹುದು ಎಂಬ ಕಲ್ಪನೆಯನ್ನು ಜನರ ಮುಂದಿಡಿ. ಪ್ರಧಾನಿ ಮೋದಿ ನಾಯಕತ್ವ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಾಯಕತ್ವ ಹಾಗೂ ಮಹಾಗಠಬಂಧನ್‌ ನಾಯಕತ್ವಗಳನ್ನು ಜನರು ಹೋಲಿಸಿ ನೋಡಲಿ. ಯಾರು ಸುಭದ್ರವಾಗಿರುವಂಥ ಅಭಿವೃದ್ಧಿಪಥದ ಸರ್ಕಾರ ಕೊಡಬಹುದು ಎಂಬುದನ್ನು ರಾಜ್ಯದ ಜನರ ಮುಂದಿಡಿ ಎಂಬ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರುವುದರಲ್ಲಿ ಎಳ್ಳಷ್ಟೂಅನುಮಾನವಿಲ್ಲ. ವಿವಿಧ ರಾಜ್ಯಗಳ ಅನೇಕ ಪ್ರಾದೇಶಿಕ ಪಕ್ಷಗಳು ನಮ್ಮ ಜೊತೆ ಕೈಜೋಡಿಸಿವೆ. ಬಿಜೆಪಿ ಪರ ವಾತಾವರಣವಿದೆ. ಇಂದಿನಿಂದ ಎಲ್ಲ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಪೂರ್ಣ ಸಮಯವನ್ನು ಪಕ್ಷ ಸಂಘಟನೆಗಾಗಿ ಮೀಸಲಿಡಬೇಕು.

ಮಾ.2ರೊಳಗೆ ಐದು ಕಾರ್ಯಕ್ರಮಗಳನ್ನು ನೀಡಲಾಗಿದೆ. ಅವುಗಳನ್ನು ಪೂರ್ಣಗೊಳಿಸಬೇಕು. ಕನಿಷ್ಠ 40 ಲಕ್ಷ ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ಪಕ್ಷದ ಧ್ವಜ ಹಾರಬೇಕು. ಫೆ.26ರಂದು ಕನಿಷ್ಠ 50 ಲಕ್ಷ ಕಾರ್ಯಕರ್ತರ ಮನೆಗಳ ಮುಂದೆ ಕಮಲ ದೀಪ ಹಚ್ಚುವ ಮೂಲಕ ‘ಕಮಲ ದೀಪಾವಳಿ’ ಆಚರಿಸಬೇಕು ಎಂದು ಸೂಚಿಸಿದರು.

Follow Us:
Download App:
  • android
  • ios