ತೆರೆಮರೆಯಲ್ಲಿ ಬಿಜೆಪಿ ಪ್ಲಾನ್ : ಜಾರಕಿಹೊಳಿ ಟೀಂ ಬಂದರೆ ಯಾವ ಸ್ಥಾನ..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Sep 2018, 7:41 AM IST
BJP Planning To Poach UnHappy Jarkiholi Brothers
Highlights

ಅತೃಪ್ತರನ್ನು ಸೆಳೆಯುವ ಪ್ರಯತ್ನವನ್ನು ಬಿಜೆಪಿ ತೆರೆಮರೆಯಲ್ಲಿ ಆರಂಭಿಸಿದ್ದು, ಇದಕ್ಕೆ ಪೂರಕವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೇ ಜಾರಕಿಹೊಳಿ ಸಹೋದರರು ಬಂದರೆ ಯಾವ ಸ್ಥಾನ ನೀಡಬೇಕು ಎನ್ನುವ ಬಗ್ಗೆ ತೆರೆ ಮರೆಯಲ್ಲಿ ಚರ್ಚೆ ನಡೆದಿದೆ. 

ಬೆಂಗಳೂರು :  ಪ್ರಸ್ತುತ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಉಂಟಾಗಿರುವ ಭಿನ್ನಮತ, ಅಸಮಾಧಾನವನ್ನು ಬಳಸಿಕೊಂಡು ಅತೃಪ್ತರನ್ನು ಸೆಳೆಯುವ ಪ್ರಯತ್ನವನ್ನು ಬಿಜೆಪಿ ತೆರೆಮರೆಯಲ್ಲಿ ಆರಂಭಿಸಿದ್ದು, ಇದಕ್ಕೆ ಪೂರಕವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಮಂಗಳವಾರ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಬಗ್ಗೆ ಯಡಿಯೂರಪ್ಪ ಗಂಭೀರವಾಗಿ ಸಮಾಲೋಚನೆ ನಡೆಸಿದರು. ಪಕ್ಷದ ಪ್ರಮುಖರಾದ ಜಗದೀಶ್‌ ಶೆಟ್ಟರ್‌, ಉಮೇಶ್‌ ಕತ್ತಿ, ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ ಸೇರಿದಂತೆ ಇತರರೊಂದಿಗೆ ಅವರು ಮಾತುಕತೆ ನಡೆಸಿದರು.

ಸಚಿವ ರಮೇಶ್‌ ಜಾರಕಿಹೊಳಿ ಮತ್ತವರ ಸಹೋದರರು ಮಹಾರಾಷ್ಟ್ರದ ಬಿಜೆಪಿ ಮುಖಂಡರೊಂದಿಗೆ ಚರ್ಚಿಸಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಯಡಿಯೂರಪ್ಪ ತಮ್ಮ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಶಾಸಕರು ಸರ್ಕಾರದಲ್ಲಿನ ಬೆಳವಣಿಗೆಯಿಂದಾಗಿ ತೀವ್ರ ಅಸಮಾಧಾನಗೊಂಡಿದ್ದಾರೆ. ಅವರೆಲ್ಲಾ ಬಿಜೆಪಿಗೆ ಸೇರಲು ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ, ಬೆಳಗಾವಿ ರಾಜಕಾರಣವು ರಾಜ್ಯದ ಗಮನ ಸೆಳೆದಿದ್ದು, ಸದ್ಯಕ್ಕೆ ರಾಜ್ಯದ ಕೇಂದ್ರಬಿಂದುವಾಗಿದೆ. ಜಾರಕಿಹೊಳಿ ಕುಟುಂಬವು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಗೆ ಮುಂದಾದರೆ ಬಿಜೆಪಿಯ ಮುಂದಿನ ನಡೆ ಹೇಗಿರಬೇಕು ಮತ್ತು ಪಕ್ಷಕ್ಕೆ ಬರುವರಿಗೆ ಯಾವ ರೀತಿಯ ಸ್ಥಾನ-ಮಾನ ನೀಡಬೇಕು ಎಂಬುದರ ಕುರಿತು ಕಾರ್ಯತಂತ್ರಗಳ ಸಮಾಲೋಚನೆ ನಡೆಸಲಾಯಿತು ಎಂದು ತಿಳಿದುಬಂದಿದೆ.

ಜಾರಕಿಹೊಳಿ ನಡೆಯೇ ಮುಖ್ಯ:

ಜಾರಕಿಹೊಳಿ ಕುಟುಂಬದವರ ನಡೆಯನ್ನು ನೋಡಿಕೊಂಡು ಸರ್ಕಾರ ರಚನೆ ಮಾಡುವ ಕುರಿತು ಮುಂದಿನ ರಾಜಕೀಯ ನಡೆ ಇಡುವ ಬಗ್ಗೆ ನಾಯಕರು ಚರ್ಚಿಸಿದರು. ಎಷ್ಟುಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂಬ ಲೆಕ್ಕಾಚಾರ ಹಾಕಿದ ನಾಯಕರು, ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ಬಿಜೆಪಿಗೆ ಬಂದರೆ ಪಕ್ಷದಲ್ಲಿನ ಶಾಸಕರು ಯಾವುದೇ ಕಾರಣಕ್ಕೂ ಭಿನ್ನಮತ ನಡೆಸಬಾರದು. ಈ ಬಗ್ಗೆ ಯಾವ ರೀತಿ ನಿರ್ಧಾರ ಕೈಗೊಳ್ಳಬೇಕು, ಪಕ್ಷದ ನಾಯಕರ ಮನವೊಲಿಕೆಯನ್ನು ಯಾವ ರೀತಿ ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು ಎನ್ನಲಾಗಿದೆ.

ಒಂದು ವೇಳೆ ಬಿಜೆಪಿಗೆ ಸರ್ಕಾರ ರಚನೆ ಮಾಡುವ ಅವಕಾಶ ಸಿಕ್ಕರೆ ಒಗ್ಗಟ್ಟು ಪ್ರದರ್ಶಿಸಬೇಕು. ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಭಿನ್ನಮತ ಉಂಟಾಗಬಾರದು. ಪಕ್ಷವು ಸರ್ಕಾರ ರಚನೆ ಮಾಡಿ ಮುಜಗರಕ್ಕೊಳಗಾದಂತೆ ಮತ್ತೊಮ್ಮೆ ಆ ಪರಿಸ್ಥಿತಿ ಉಂಟಾಗಬಾರದು. ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಿರುವ ಕಾರಣ ನಾಯಕರೆಲ್ಲಾ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಯಡಿಯೂರಪ್ಪ ನಾಯಕರಿಗೆ ಸೂಚಿಸಿದರು ಎಂದು ಹೇಳಲಾಗಿದೆ.

ಆಪರೇಷನ್‌ ಕಮಲ ಇಲ್ಲ- ಶೆಟ್ಟರ್‌:

ಯಡಿಯೂರಪ್ಪ ಜತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಆಪರೇಷನ್‌ ಕಮಲಕ್ಕೆ ಬಿಜೆಪಿ ಮುಂದಾಗಿದೆ ಎಂಬ ಆರೋಪವು ನಿರಾಧಾರ. ಕಾಂಗ್ರೆಸ್‌-ಜೆಡಿಎಸ್‌ನ ಯಾವ ಶಾಸಕರನ್ನೂ ಬಿಜೆಪಿ ಸೆಳೆಯುತ್ತಿಲ್ಲ. ಅವರೇ ಕಿತ್ತಾಡಿಕೊಂಡು ಸರ್ಕಾರ ಪತನವಾದರೆ ಅದಕ್ಕೆ ಬಿಜೆಪಿ ಹೊಣೆಯಲ್ಲ. ಪಕ್ಷದ ರಾಜ್ಯಾಧ್ಯಕ್ಷರ ಜತೆ ಪ್ರಸ್ತುತ ರಾಜಕಾರಣದ ಕುರಿತು ಮಾತುಕತೆ ನಡೆಸುವುದರ ಜತೆಗೆ ವಿಧಾನಪರಿಷತ್‌ ಚುನಾವಣೆ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದರು.

ಕಾಂಗ್ರೆಸ್‌ನಲ್ಲಿ ಕಚ್ಚಾಟ ನಡೆಯುತ್ತಿದ್ದು, ಬೆಳಗಾವಿಯಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಸರ್ಕಾರಕ್ಕೆ ಏಟು ಕೊಟ್ಟಿದೆ. ಅವರ ಒಳಜಗಳದಿಂದ ಸರ್ಕಾರ ಬಿದ್ದುಹೋಗಲಿದೆ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಬಿಜೆಪಿಯ ಐವರು ಶಾಸಕರನ್ನು ರಾಜೀನಾಮೆ ಕೊಡಿಸಿದರೆ ಹೇಗೆ ಎಂಬ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ಮೈತ್ರಿ ಸರ್ಕಾರದ ಒಳಜಗಳ ಬಿಜೆಪಿ ಮೇಲೆ ಹಾಕುವುದು ಸರಿಯಲ್ಲ ಎಂದು ಹೇಳಿದರು.

ಸಚಿವ ಡಿ.ಕೆ.ಶಿವಕುಮಾರ್‌ ತಮ್ಮದೇ ಶೈಲಿಯಲ್ಲಿ ಸೀನ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಸತ್ಯ ಏನೆಂಬುದನ್ನು ಸಾರ್ವಜನಿಕರಿಗೆ ಹೇಳಬೇಕು. ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಆದಾಯ ತೆರಿಗೆ ವಿಚಾರದಲ್ಲಿ ಇಲ್ಲ-ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ ಮಾತನಾಡಿ, ಮೈತ್ರಿ ಸರ್ಕಾರಕ್ಕೆ ಹೆಚ್ಚು ದಿನ ಆಯಸ್ಸು ಇಲ್ಲ. ಆಪರೇಷನ್‌ ಕಮಲ ಮಾಡುತ್ತಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ಅವರಾಗಿಯೇ ಬಂದರೆ ಸ್ವಾಗತ ಮಾಡುತ್ತೇವೆ. ಬೆಳಗಾವಿ, ಕನಕಪುರದವರು ರಾಜಿ ಮಾಡಿಕೊಂಡರೆ ನಮ್ಮದೇನೂ ಅಭ್ಯಂತರ ಇಲ್ಲ. ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ನಾನು ಯಾರನ್ನೂ ಸಂಪರ್ಕ ಮಾಡಿಲ್ಲ. ನನ್ನನ್ನು ಸಹ ಯಾರೂ ಸಂಪರ್ಕ ಮಾಡಿಲ್ಲ. ಆಪರೇಷನ್‌ ಕಮಲ ಎಲ್ಲ ಸುಳ್ಳು. ನನ್ನನ್ನು ಯಾರಾದರೂ ಸಂಪರ್ಕ ಮಾಡಿದರೆ ಮಾಧ್ಯಮದವರಿಗೆ ಖಂಡಿತವಾಗಿಯೂ ಹೇಳುತ್ತೇನೆ.

- ಉಮೇಶ್‌ ಕತ್ತಿ, ಬಿಜೆಪಿ ಶಾಸಕ

loader